ವಿಜಯಪುರ

ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ ಶಿಕ್ಷೆ, ಒಂದು ಲಕ್ಷ ರೂಪಾಯಿ ದಂಡ, ಯಾರು ಈ ಮಹಾಶಯ? ಏನಿದು ಪ್ರಕರಣ?

ಸರಕಾರ ನ್ಯೂಸ್ ವಿಜಯಪುರ

ಪತ್ನಿಯನ್ನು ಅತಿ ಕ್ರೂರವಾಗಿ ಹತ್ಯೆಗೈದ ಪತಿಗೆ ಇಲ್ಲಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿದೆ.

ಸಿಂದಗಿಯ ಚಾಂದಕವಟೆ ಸೀಮಾಂತರದ ನಿವಾಸಿ ಗುರುಬಾಳ ಊರ್ಫ್ ಗುರಪ್ಪ ಕನ್ನಾಳ ಶಿಕ್ಷೆಗೆ ಗುರಿಯಾಗಿದ್ದಾನೆ. ಈತ 2022 ಜ. 30 ರಂದು ಸಂಜೆ 7 ರ ಸುಮಾರಿಗೆ ತನ್ನ ಪತ್ನಿ ಶೀಲವಂತಿಯನ್ನು ಕಬ್ಬು ಕತ್ತರಿಸುವ ಹರಿತ ಆಯುಧದಿಂದ ಹೊಡೆದು ಭೀಕರವಾಗಿ ಹತ್ಯೆಗೈದಿದ್ದನು. ಬಿಡಿಸಲು ಹೋದವರಿಗೂ ಜೀವ ಬೆದರಿಕೆ ಹಾಕಿದ್ದನು. ಈ ಬಗ್ಗೆ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿವರ:

ಗುರುಬಾಳ ಶಿಲವಂತಿಯೊಂದಿಗೆ 10 ವರ್ಷಗಳ ಹಿಂದೆ ಎರಡನೇ ಮದುವೆಯಾಗಿದ್ದನು. ಇವರಿಬ್ಬರಿಗೆ ಸಂದೀಪ ಮತ್ತು ಸಾಕ್ಷಿ ಎಂಬ ಎರಡು ಮಕ್ಕಳಿದ್ದಾರೆ.

ಶೀಲವಂತಿಯೊಂದಿಗೆ ಮದುವೆಯಾದಾಗಿನಿಂದಲೂ ಗುರುಬಾಳ ಸರಿಯಾಗಿ ದುಡಿಯದೇ ಸಾರಾಯಿ ಕುಡಿದು ಜಗಳ ಕಾಯುತ್ತಿದ್ದನು. ಹೀಗಾಗಿ ಶೀಲವಂತಿ ತಮ್ಮೂರಿನ ಜಮೀನಿನಲ್ಲಿ ದುಡಿಯಲು ಇದ್ದಳು. ಅಲ್ಲಿಗೂ ಸಾರಾಯಿ ಕುಡಿದು ಬಂದ ಗುರುಬಾಳ ಜಗಳ ತೆಗೆಯುತ್ತಿದ್ದರಿಂದ ಶೀಲವಂತಿ ತನ್ನ ತಂದೆಯ ಬಳಿ ವಾಸವಾಗಿದ್ದಳು. ಅಲ್ಲಿಗೂ ಬಂದು ಜಗಳ ತೆಗೆದ ಗುರುಬಾಳ 2022 ಜ.30 ರಂದು ಸಂಜೆ 7 ರ ಸುಮಾರಿಗೆ ಜಗಳ ತೆಗೆಯಲಾಗಿ ತೊಗರಿ ಹೊಲದಲ್ಲಿ ಎದ್ದು ಹೋಗುತ್ತಿದ್ದ ಶೀಲವಂತಿಯನ್ನು ಕಬ್ಬು ಕತ್ತರಿಸುವ ಹರಿತ ಆಯುಧದಿಂದ ತಲೆಗೆ, ಎಡಕಪಾಳಿಗೆ, ಬಲಗೈ ಹಸ್ತಕ್ಕೆ ಎಡಗೈ ಮೊಳಕೈಗೆ ಹೊಡೆದು ಭಾರಿ ರಕ್ತ ಗಾಯ ಪಡಿಸಿ ಕೊಲೆ ಮಾಡಿದ್ದನು.

ಬಿಡಿಸಲು ಹೋದವರಿಗೆ ಜೀವ ಬೆದರಿಕೆ ಹಾಕಿ ಸೈಕಲ್ ಮೇಲೆ ಹೋದ ಗುರುಬಾಳ ದಾರಿಯಲ್ಲಿ ವಸತಿ ಶಾಲೆಯ ಕೈಪಂಪಿನ ಹತ್ತಿರ ನೀರಿನಲ್ಲಿ ಕೊಯ್ತ ಮತ್ತು ತನ್ನ ಮೈಮೇಲಿದ್ದ ಬಟ್ಟೆಗಳಿಗೆ ಹತ್ತಿದ ರಕ್ತ ತೊಳೆದು, ಕೊಯ್ತವನ್ನು ಮುಳ್ಳು ಕಂಟಿಯಲ್ಲಿ ಒಗೆದು ಸಾಕ್ಷಿ ಪುರಾವೆ ನಾಶಪಡಿಸಿದ್ದನು.

ವಿಚಾರಣೆ ನಡೆಸಿದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಭಾಶ ಸಂಕದ ಗುರುಬಾಳ ಊರ್ಫ್ ಗುರಪ್ಪಗೆ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದ್ದಾರೆ. ಸಿಂದಗಿ ಎಎಸ್‌ಐ ಎಂ.ಜಿ. ಬಿರಾದಾರ ತನಿಖೆ ನಡೆಸಿದ್ದರು. ಸರ್ಕಾರಿ ಅಭಿಯೋಜಕ ಬಿ.ಡಿ. ಬಾಗವಾನ ವಾದ ಮಂಡಿಸಿದ್ದರು.

error: Content is protected !!