ವಿಜಯಪುರ

ಐಟಿ ದಾಳಿಯಲ್ಲಿ ಸಿಕ್ಕ ಹಣ ಯಾರದ್ದು ಗೊತ್ತಾ? ಸಚಿವ ಎಂ.ಬಿ. ಪಾಟೀಲ ಹೇಳಿದ್ದೇನು?

ಸರಕಾರ ನ್ಯೂಸ್‌  ವಿಜಯಪುರ

ಲೋಕಸಭೆ ಹಾಗೂ ಪಂಚರಾಜ್ಯ ಚುನಾವಣೆಗಳಿಗೆ ರಾಜ್ಯ ಕಾಂಗ್ರೆಸ್‌ನಿಂದ ಅನೈತಿಕ ಮಾರ್ಗವಾಗಿ ಕಂತೆ ಕಂತೆ ಹಣ ಹೋಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರಿಗೆ ಸಚಿವ ಎಂ.ಬಿ. ಪಾಟೀಲ ಸಖತ್‌ ತಿರುಗೇಟು ನೀಡಿದ್ದು, ಐಟಿ ದಾಳಿಯಲ್ಲಿ ಸಿಗುತ್ತಿರುವ ಬೇನಾಮಿ ಹಣ ಹಿಂದಿನ ಬಿಜೆಪಿ ಸರ್ಕಾರದ ಕಮೀಷನ್‌ ಇರಬೇಕೆಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನ ಸರ್ಕಾರದಲ್ಲಾದ ಭ್ರಷ್ಟಾಚಾರದ ಹಣ ಇದೀಗ ಹೊರಬರುತ್ತಿದೆ. ಇದು ಕಾಂಗ್ರೆಸ್ ಅವಧಿಯಲ್ಲಾದ ಗುತ್ತಿಗೆಯ ಹಣ ಅಲ್ಲ ಎಂದಿದ್ದಾರೆ.

ಸೋಮವಾರ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಐಟಿ ದಾಳಿ ಮುಂದುವರಿದಿದ್ದು, ಕೋಟಿ ಕೋಟಿ ಹಣ ಸಿಕ್ಕಿದೆ. ಇದೆಲ್ಲ ಈ ಹಿಂದಿನ ಸರ್ಕಾರದಲ್ಲಾದ ಕಾಮಗಾರಿಗಳ ಹಣ. ನಮ್ಮ ಅವಧಿಯಲ್ಲಿ ಇನ್ನೂ ಯಾವುದೇ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಎಂದರು.

ಐಟಿ ದಾಳಿಯಲ್ಲಿ ಸಿಕ್ಕ ದುಡ್ಡಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧ ಇಲ್ಲ. ಅದು ಗುತ್ತಿಗೆದಾರರ ಹಣ. ಈ ಹಿಂದಿನ ಸರ್ಕಾರದಲ್ಲಿ ಸ್ಟೋರ್ ಆಗಿದ್ದ ಹಣ ಇದೀಗ ಹೊರಬರುತ್ತಿದೆ. ಬಹುಶಃ ಈ ಹಿಂದಿನ ಸರ್ಕಾರದ ಶೇ. 40 ಕಮೀಷನ್ ಹಣ ಈಗ ಹೊರಬರುತ್ತಿದೆ. ತನಿಖೆ ಮುಂದುವರಿದಿದೆ. ಅಧಿಕಾರಿಗಳು ತನಿಖೆ ನಡೆಸಲಿದ್ದಾರೆಂದರು.

ಇನ್ನು ಸಚಿವ ಸತೀಶ ಜಾರಕಿಹೊಳಿ ಪಕ್ಷದ ವಿಚಾರದಲ್ಲಿ ಅಸಮಾಧಾನಗೊಂದಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಎಂ.ಬಿ. ಪಾಟೀಲ, ಹಾಗೇನಿಲ್ಲ. ಸತೀಶ ಜಾರಕಿಹೊಳಿ ಮತ್ತು ನಾನು ಆತ್ಮೀಯ ಸ್ನೇಹಿತರು. ದಸರಾ ನೋಡಲ ಮೈಸೂರಿಗೆ ನನಗೂ ಆಹ್ವಾನ ನೀಡಿದ್ದರು. ಮೈಸೂರಿನಲ್ಲಿ ಬಂಡಾಯವೇಳುವಂಥದ್ದೇನಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ನಲ್ಲಿಯೇ ಅಸಮಾಧಾನವಿದೆ ಎಂದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!