ಕೆಇಬಿಗೆ ಮೊಸಳೆಯನ್ನೇ ಹೊತ್ತು ತಂದ ರೈತರು…ಕಾರಣ ಕೇಳಿದರೆ ಬೆಚ್ಚಿ ಬೀಳೋದು ಗ್ಯಾರಂಟಿ…!
ಸರಕಾರ ನ್ಯೂಸ್ ವಿಜಯಪುರ
ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ದಿನಕ್ಕೊಂದು
ಅನಾಹುತಗಳು ಸಂಭವಿಸುತ್ತಿದ್ದು, ರೈತರ ಬವಣೆ ಮನವರಿಕೆ ಮಾಡಿಕೊಡಲು ರೈತರು ಜಮೀನಿಗೆ ದಾಂಗುಡಿಯಿಟ್ಟ ಮೊಸಳೆಯನ್ನೇ ಹೊತ್ತು ಕೆಇಬಿಗೆ ತಂದಿದ್ದಾರೆ.
ಹೌದು, ರಾತ್ರಿ ನೀರುಣಿಸಲು ಹೋದ ಸಂದರ್ಭ ಜಮೀನಿಗೆ ನುಗ್ಗಿದ ಮೊಸಳೆಯಿಂದ ಬಚಾವುಗೊಂಡ ರೈತ ಬೆಳಗ್ಗೆ ಗ್ರಾಮಸ್ಥರನ್ನು ಕರೆದುಕೊಂಡು ಹೋಗಿ ಮೊಸಳೆ ಸೆರೆಹಿಡಿದಿದ್ದಲ್ಲದೇ ತಮ್ಮ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಅದೇ ಮೊಸಳೆಯೊಂದಿಗೆ ಕೆಇಬಿಗೆ ಬಂದಿದ್ದಾನೆ.
ಕೃಷ್ಣಾ ನದಿ ತೀರದ ಪ್ರದೇಶವಾದ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ ಗುರುವಾರ ಇಂಥದ್ದೊಂದು ಘಟನೆ ನಡೆದಿದ್ದು, ರೈತರು ಹಾಗೂ ಅಧಿಕಾರಿಗಳನ್ನು ಬೆಚ್ಚಿ ಬೀಳಿಸಿದೆ.
ರೋಣಿಹಾಳ ದ ರೈತ ಬಸಪ್ಪ ಸುಲ್ತಾನಪುರ ಎಂಬುವರು ಬುಧವಾರ ತಡರಾತ್ರಿ ಜಮೀನಿಗೆ ನೀರುಣಿಸಲು ಹೋಗಿದ್ದಾರೆ. ರಾತ್ರಿ 3.30 ರ ಸುಮಾರಿಗೆ ವಿದ್ಯುತ್ ಪೂರೈಕೆಯಾಗಿದ್ದು, ಒಣಗುತ್ತಿರುವ ಬೆಳ ಉಳಿಸಿಕೊಳ್ಳಲೆಂದು ಕಗ್ಗತ್ತಲಿನಲ್ಲಿ ಜಮೀನಿಗೆ ಹೋದರೆ ಏಕಾಏಕಿ ಮೊಸಳೆ ಬಂದಿದೆ. ಕತ್ತಲಲ್ಲಿ ಕಾಣದೆ ಮೊಸಳೆ ಮೇಲೆ ಕಾಲಿಟ್ಟಿದ್ದಾನೆ. ಕೂಡಲೇ ಮೊಸಳೆ ಎಂಬುದು ಅರಿವಾಗಿ ಕಾಲ್ಕಿತ್ತಿದ್ದಾನೆ. ಭಯದಿಂದ ಗ್ರಾಮಕ್ಕೆ ಬಂದಿದ್ದಾನೆ. ಬಳಗ್ಗೆ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾನೆ.
ಬಳಿಕ ಗ್ರಾಮಸ್ಥರು ಜಮೀನಿಗೆ ತೆರಳಿ ಮೊಸಳೆ ಸೆರೆಹಿಡಿದಿದ್ದಾರೆ. ಈ ಬವಣೆ ಅಧಿಕಾರಿಗಳಿಗೂ ಹಾಗೂ ಸರ್ಕಾರಕ್ಕೂ ಮನವರಿಕೆ ಮಾಡಿಕೊಡಲೆಂದು ಟ್ರ್ಯಾಕ್ಟರ್ ನಲ್ಲಿ ಮೊಸಳೆ ಹೊತ್ತು ರೋಣಿಹಾಳದ 110 ಕೆವಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬಂದಿದ್ದಾರೆ. ಕಚೇರಿ ಮುಂದೆ ಮೊಸಳೆ ಇಳಿಸಿ ಅಧಿಕಾರಿಗಳಿಗೆ ತೋರಿಸಿದ್ದಾರೆ.
ಸರ್ಕಾರ ರೈತರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂಬುದಕ್ಕೆ ಕೃಷ್ಣಾತೀರದ ಹಳ್ಳಿಗಳ ಪರಿಸ್ಥಿತಿ ಯೇ ಸಾಕ್ಷಿ. ಇಲ್ಲಿನ ಸುತ್ತಮುತ್ತಲಿನ ಹಳ್ಳಿಗಳಿಗ ರಾತ್ರಿ ಮೊಸಳೆ, ಹಾವು ಮತ್ತಿತರ ವಿಷ ಜಂತುಗಳು ದಾಂಗುಡಿ ಇಡುತ್ತಿವೆ.
ಬಳೂತಿ, ನಾಗರದಿನ್ನಿ, ಮಟ್ಟಿಹಾಳ, ರೋಣಿಹಾಳ, ಹಳ್ಳದಗೆಣ್ಣೂರ ಭಾಗದಲ್ಲಿ ಮೊಸಳೆ, ಹಾವು ಹಾವಳಿ ಹೆಚ್ಚಿದೆ. ಇಂಥ ಪರಿಸ್ಥಿತಿಯಲ್ಲಿ ರಾತ್ರಿ ವಿದ್ಯುತ್ ಪೂರೈಕೆ ಮಾಡಿದರೆ ಬೆಳೆಗೆ ನೀರುಣಿಸುವುದಾದರೂ ಹೇಗೆ? ಎಂದು ಆಕ್ರೋಶ ಹೊರಹಾಕಿದ್ದಾರೆ.