ವಿಜಯಪುರ

ಕ್ರಿಪ್ಟೊ ಮೈನಿಂಗ್‌ ವಂಚಕರ ಹೆಡೆ ಮುರಿ ಕಟ್ಟಿದ ಖಾಕಿ ಪಡೆ, ಕಿನ್ಯಾ ಮೂಲದ ವಂಚಕ ಸೇರಿ ನಾಲ್ವರು ಅರೆಸ್ಟ್‌, ಹೇಗಿತ್ತು ಗೊತ್ತಾಗಿ ಪೊಲೀಸ್‌ ಕಾರ್ಯಾಚರಣೆ?

ಸರಕಾರ ನ್ಯೂಸ್‌ ವಿಜಯಪುರ

‘ಕ್ರಿಪ್ಟೋ ಮೈನಿಂಗ್ ಮಾಡಲು ಹಣ ಹೂಡಿಕೆ ಮಾಡಿದರೆ ಹೂಡಿದ ಹಣದ ಜತೆಗೆ ಪ್ರತಿಶತಃ 200 ಲಾಭಾಂಶ ನೀಡುವುದಾಗಿʼ ನಂಬಿಸಿ ಖ್ಯಾತ ಉದ್ಯಮಿಯೊಬ್ಬರಿಂದ ಅರ್ಧಕೋಟಿಗೂ ಅಧಿಕ ಹಣ ವಂಚಿಸಿದ್ದ ವಂಚಕರನ್ನು ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿ ತಂದಿದ್ದಾರೆ.

ಧಾರವಾಡದ ಶಮಸುದ್ದಿನ ಅಲಿಯಾಸ್‌ ಅಸ್ಲಂ ಅಲಿಯಾಸ್‌ ಕುನಾಲ ಜಫರಸಾಬ ಸಂಗರೇಶಕೊಪ್ಪ, ಫಯಾಜ್‌ ಅಹ್ಮದ್‌ ಅಳಿಯಾಸ್‌ ಫಯಾಜ್‌ ನಿಜಾಮುದ್ದಿನ್‌ ತಡಕೋಡ, ಹುಬ್ಬಳ್ಳಿಯ ರುಬೇನ ದಶರಥ ಬಾಳೆ ಹಾಗೂ ಕಿನ್ಯಾ ದೇಶದ ಕ್ರಿಶ್‌ ಥಾಮಸ್‌ ಒಂಬಾಗಾ ಅನುಯಾಗ ಬಂಧಿತ ಆರೋಪಿಗಳು.

ಏನಿದು ಪ್ರಕರಣ?

ಬಂಧಿತ ಆರೋಪಿಗಳು ನಗರದ ಬಟ್ಟೆ ವ್ಯಾಪಾರಿ ಮಹಾವೀರ ಕಾಲನಿಯ ವಿಶಾಲಕುಮಾರ ರವೀಂದ್ರ ಜೈನ್ ಎಂಬುವರಿಗೆ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ 59,12,765 ರೂಪಾಯಿ ವಂಚನೆಗೈದಿದ್ದರು.

ವಿಜಯಪುರದ ಬಟ್ಟೆ ವ್ಯಾಪಾರಿಗೆ ವಂಚನೆ, ಅರ್ಧಕೋಟಿಗೂ ಅಧಿಕ ಹಣ ಕಳೆದುಕೊಂಡ ಮಾಲೀಕ….ಇಲ್ಲಿದೆ ಇಂಟ್ರೆಸ್ಟಿಂಗ್‌ ಸ್ಟೋರಿ…

2023 ಜೂ. 19ರಂದು ವಿಶಾಲಕುಮಾರ ಅವರ ಮೊಬೈಲ್‌ ನಂಬರ್‌ನ್ನು ‘ಫಂಡ್‌ಬೇಸ್-5’ ಎಂಬ ವಾಟ್ಸ್‌ಆ್ಯಪ್ ಗುಂಪಿಗೆ ಸೇರ್ಪಡೆಗೊಳಿಸಿ ‘ಕ್ರಿಪ್ಟೋ ಮೈನಿಂಗ್ ಮಾಡಲು ಹಣ ಹೂಡಿಕೆ ಮಾಡಿದರೆ ಹೂಡಿದ ಹಣದ ಜತೆಗೆ ಪ್ರತಿಶತಃ 200 ಲಾಭಾಂಶ ನೀಡುವುದಾಗಿ’ತಿಳಿಸಿದ ಬಂಧಿತ ಆರೋಪಿಗಳು ವಿಶಾಲಕುಮಾರ ಹಣ ಹೂಡಿಕೆ ಮಾಡುವಂತೆ ಪ್ರಚೋದಿಸಿದ್ದಾರೆ. ತಮ್ಮದು ಯುನೈಟೆಡ್ ಸ್ಟೇಟ್ ಆಫ್ ಅಮೇರಿಕಾದ ನೋಂದಾಯಿತ ಕಂಪನಿಯಾಗಿದ್ದು, ಯಾವುದೇ ವಂಚನೆಯಿಲ್ಲದಂತೆ ಹೂಡಿಕೆದಾರರಿಗೆ ಲಾಭಾಂಶ ಒದಗಿಸಿಕೊಡುವ ಉದ್ದೇಶ ಹೊಂದಿದೆ. ಜಗತ್ತಿನ ನಾನಾ ಭಾಗಗಳಲ್ಲಿ ನಮ್ಮ ಶಾಖೆಗಳಿದ್ದು, ಭಾರತದಲ್ಲೂ ನಮ್ಮ ಪ್ರತಿನಿಧಿಗಳು ತಮಗೆ ಸಹಕರಿಸಲಿದ್ದಾರೆ ಎಂಬಿತ್ಯಾದಿ ಕಂಪನಿ ಸಂಬಂಧಿತ ವಿವರ ನೀಡಿದ್ದು, ಅದನ್ನು ನಂಬಿ ವಿಶಾಲಕುಮಾರ ಹಂತ ಹಂತವಾಗಿ ಹಣ ಹೂಡಿಕೆ ಮಾಡುತ್ತಾ ಬಂದಿದ್ದರು. ಕೊನೆಗೆ ಲಾಭಾಂಶವೂ ನೀಡದೆ, ಹೂಡಿಕೆ ಹಣವೂ ನೀಡದೇ ವಂಚಿಸಿದ್ದರು. ಈ ಬಗ್ಗೆ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹೇಗಿತ್ತು ಕಾರ್ಯಾಚರಣೆ?

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್‌ಪಿ ಋಷಿಕೇಷ ಸೋನಾವನೆ ಎಎಸ್‌ಪಿ ಶಂಕರ ಮಾರಿಹಾಳ ಮಾರ್ಗದರ್ಶನದೊಂದಿಗೆ ಪೊಲೀಸ್‌ ಇನ್ಸಪೆಕ್ಟರ್‌ ರಮೇಶ ಅವಜಿ, ಪಿಎಸ್‌ ಐ ಮಲ್ಲಿಕಾರ್ಜುನ ತಳವಾರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು.

ಚುರುಕಿನ ಕಾರ್ಯಾಚರಣೆಗಿಳಿದ ತಂಡ ವಂಚಕರನ್ನುಬಂಧಿಸುವಲ್ಲಿ ಸಫಲವಾಗಿದ್ದಾರೆ. ಶಮಸುದ್ದಿನ, ಫಯಾಜ್‌ ಹಾಗೂ ರುಬಿನ್‌ ತಮ್ಮ ಸಂಬಂಧಿಕರ ಹೆಸರಿನಲ್ಲಿ ಪಾಸ್‌ ಬುಕ್‌ ಸೃಷ್ಠಿಸಿ ಸಿಮ್‌ಕಾರ್ಡ್‌ ಖರೀದಿಸಿ ಕಿನ್ಯಾದ ಕ್ರಿಶ್‌ಗೆ ಕೊಡುತ್ತಿದ್ದರು. ಆ ಖಾತೆ ಮೂಲಕ ವಹಿವಾಟು ನಡೆಯುತ್ತಿತ್ತು. ಈ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದ ಪೊಲೀಸ್‌ ಇನ್ಸ್‌ಪೆಕ್ಟರ್‌ ರಮೇಶ ಅವಜಿ ಹಾಗೂ  ಪಿಎಸ್‌ಐ ಮಲ್ಲಿಕಾರ್ಜುನ ತಳವಾರ ವಂಚಕರನ್ನು ಬಂಧಿಸಿ ಅವರಿಂದ ಕೃತ್ಯಕ್ಕೆ ಬಳಸಿದ ವಿವಿಧ ಕಂಪನಿಯ 5 ಮೊಬೈಲ್‌, 6 ಸಿಮ್‌ ಕಾರ್ಡ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರ 5 ಬ್ಯಾಂಕ್‌ ಖಾತೆಗಳನ್ನು ಪ್ರೀಜ್‌ ಮಾಡಿಸಿ ಆಪಾದಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಂಡದ ಕಾರ್ವನ್ನು ಎಸ್‌ಪಿ ಋಷಿಕೇಶ ಸೋನಾವನೆ ಶ್ಲಾಘಿಸಿದ್ದಾರೆ.

error: Content is protected !!