ಮುಸ್ಲಿಂರಿಗೆ ಮತದಾನದ ಹಕ್ಕು ಬೇಡ, ಸ್ವಾಮೀಜಿ ಮೇಲೆ ಎಫ್ ಐಆರ್ ದಾಖಲು, ಶಾಸಕ ಯತ್ನಾಳ ಏನಂದ್ರು?
ವಿಜಯಪುರ: ಮುಸ್ಲಿಂರ ಮತದಾನದ ಹಕ್ಕು ಕಿತ್ತುಕೊಳ್ಳುವ ಬಗ್ಗೆ ಮಾತನಾಡಿದ ಚಂದ್ರಶೇಖರ ಸ್ವಾಮೀಜಿ ಹೇಳಿಕೆಯನ್ನು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಮರ್ಥಿಸಿಕೊಂಡಿದ್ದಲ್ಲದೇ ಸ್ವಾಮೀಜಿ ಹೇಳಿಕೆಗೆ ಸ್ವಾಗತ ಎಂದಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಸಮಾರಂಭವೊಂದರಲ್ಲಿ ಚಂದ್ರಶೇಖರ ಸ್ವಾಮೀಜಿ ಮುಸ್ಲಿಂರ ಮತದಾನದ ಹಕ್ಕು ಕಿತ್ತುಕೊಳ್ಳುವ ಬಗ್ಗೆ ಮಾತನಾಡಿದ್ದರು. ಅಲ್ಲದೇ, ತಮ್ಮ ಹೇಳಿಕೆಗೆ ವಿಷಾದ ಕೂಡ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಸ್ವಾಮೀಜಿ ಮೇಲೆ ಎಫ್‌ಐಆರ್ ದಾಖಲಾದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳರು ಸ್ವಾಮೀಜಿ ಹೇಳಿಕೆ ಸರಿಯಾಗಿದೆ ಎಂದಿದ್ದಾರೆ.
ಸ್ವಾಮೀಜಿ ಮೇಲೆ ಎಫ್‌ಐಆರ್ ದಾಖಲಿಸಿದ್ದು ತಪ್ಪು, ಅವರು ಒಕ್ಕಲಿಗ ಸ್ವಾಮೀಜಿ. ಈ ದೇಶದ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನಕ್ಕೆ ಹುಟ್ಟಿದವರ ಹಾಗೆ ಮಾತನಾಡುತ್ತಾರಲ್ಲ ಅದಕ್ಕಾಗಿ ಸ್ವಾಮೀಜಿ ಹಾಗೆ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ಹಿಂದುಗಳಿಗೆ ಮತದಾನದ ಹಕ್ಕಿದೆಯಾ ? ಹಿಂದುಗಳಿಗೆ, ಕ್ರಿಶ್ಚಿಯನ್‌ರಿಗೆ ಪಾಕಿಸ್ತಾನದಲ್ಲಿ ಮತದಾನದ ಹಕ್ಕಿಲ್ಲ, ಅಪಘಾನಿಸ್ತಾದಲ್ಲಿ ಇಲ್ಲ. ಹೀಗಾಗಿ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ. ಹಿಂದುಗಳ ಪರವಾಗಿ ಪ್ರಶ್ನೆ ಮಾಡಿದ್ದಕ್ಕೆ ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುವೆ ಎಂದಿದ್ದಾರೆ.
ಸ್ವಾಮೀಜಿ ಮೇಲಿನ ಪ್ರಕರಣ ವಾಪಸ್ ಪಡೆಯಬೇಕು. ಇರದಿದ್ದರೆ ಇಡೀ ಒಕ್ಕಲಿಗ ಸಮುದಾಯ ಸರ್ಕಾರವನ್ನು ಕೇಳಬೇಕು. ಡಿ.ಕೆ. ಶಿವಕುಮಾರ ಈ ವಿಚಾರವಾಗಿ ಮಾತನಾಡಲಿ. ತಮಗೆ ಮತ ಬೇಕಾದರೆ ಶಾಲು ಹಾರ ಸ್ವಾಮೀಜಿಗಳ ಬಳಿ ಒಯ್ದು ಇಲೆಕ್ಷನ್ಯಾಗ ಕೊಟ್ಟು ನಮ್ಮ ಪರವಾಗಿ ಆಶೀರ್ವಾದ ಮಾಡಿ ಎನ್ನುತ್ತಾರೆ. ಈಗ ಪ್ರಶ್ನೆ ಮಾಡಲಿ ಎಂದರು.