ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ಬಂದರು… ಹುಡುಗ್ಯಾರಿಗಿ ಕಾಡಿಸ್ತೀ ಅಂದ್ರು, ಬಲಗಣ್ಣಿಗೆ ಗುದ್ದಿದ್ರು, ಅನಾಮತ್ತಾಗಿ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾದರು…..ಅಬ್ಬಬ್ಬಾ ಏನಿದು ಇಂಟ್ರೆಸ್ಟಿಂಗ್ ಕೇಸ್
ಸರಕಾರ ನ್ಯೂಸ್ ವಿಜಯಪುರ
ನಂಬರ್ ಪ್ಲೇಟ್ ಇಲ್ಲದ ಬೈಕ್ ಮೇಲೆ ಬಂದ ಕಿರಾತಕರು ಅಮಾಯಕ ಯುವ ಉದ್ಯಮಿ ಮೇಲೆ ಹಲ್ಲೆ ನಡೆಸಿ ಹಣದ ಬ್ಯಾಗ್ ತೆಗೆದುಕೊಂಡು ಹೋದ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಇಂಡಿ ರಸ್ತೆಯ ಜ್ಯೋತಿ ಪೈಪ್ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದೆ. ಅಂದ ಹಾಗೆ ಹಲ್ಲೆಗೊಳಗಾದ ವ್ಯಕ್ತಿ ಜಿತೇಂದ್ರಕುಮಾರ ಮಿಠಾಲಾಲ ಜೈನ್ (29) ಎಂಬುವರಾಗಿದ್ದು, ಇದೀಗ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:
ನ್ಯೂ ಕಿರಾಣಾ ಬಜಾರ್‌ದಲ್ಲಿ ಮಂಗಳ ಟ್ರೇಡರ್ಸ್ ಹೆಸರಿನ ಕಿರಾಣಿ ಅಂಗಡಿ ಮೂಲಕ ವ್ಯಾಪಾರ ನಡೆಸುತ್ತಿರುವ ಜಿತೇಂದ್ರಕುಮಾರ ಸಂಜೆ ಅಂಗಡಿ ಬಂದ್ ಮಾಡಿ ವ್ಯಾಪಾರದ ಹಣ ಬ್ಯಾಗ್‌ನಲ್ಲಿ ಹಾಕಿಕೊಂಡವನೇ ತನ್ನ ಕಪ್ಪು ಬಣ್ಣದ ಸುಜಕಿ ಎಕ್ಸಸ್ ಮೋಟರ್ ಸೈಕಲ್ ಮೇಲೆ ಮನೆ ಹೊರಟಿದ್ದಾನೆ. ಬ್ಯಾಗ್‌ನಲ್ಲಿ 3.15 ಲಕ್ಷ ರೂಪಾಯಿ ಇದ್ದು, ಇಂಡಿ ರೋಡ್‌ದಿಂದ ಜ್ಯೋತಿ ಪೈಪ್ ಫ್ಯಾಕ್ಟರಿ ಮುಖಾಂತರ ಶಾಂತಿನಿಕೇತನ ಕಾಲೇಜ್ ರೋಡ್‌ಗೆ ಮಹಾನಗರ ಪಾಲಿಕೆಯ ಕೊಳಚೆ ನೀರು ಶುದ್ಧೀಕರಣ ಘಟಕದ ಹತ್ತಿರ ಹೊರಟಾಗ ಹಿಂದಿನಿಂದ ಮೂರು ಜನ ಹಿಂಬಾಲಿಸಿ ಬಂದಿದ್ದಾರೆ. ಕೆಂಪು ಮತ್ತು ಕಪ್ಪು ಬಣ್ಣದ ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್ ಮೇಲೆ ಬಂದವರೇ ನಿಲ್ಲಿಸಿ ಅದರಲ್ಲೊಬ್ಬ “ಮಗನೆ ಗಾಡಿ ಹ್ಯಾಂಗ್ ನಡೆಸ್ತಿ, ಹುಡುಗ್ಯಾರಿಗಿ ಕಾಡಸ್ತಿ ಅಂತಾ” ಅನ್ನುತ್ತಿದ್ದಂತೆ ಮತ್ತೊಬ್ಬ ಬಲಗಣ್ಣಿಗೆ ಬಲವಾಗಿ ಗುದ್ದಿದ್ದಾನೆ. ಜಿತೇಂದ್ರಕುಮಾರ ಬೈಕ್‌ನಿಂದ ಕೆಳಗಿಳಿಯುತ್ತಿದ್ದಂತೆ ಬೈಕ್ ತಿರುಗಿಸಿ ಪರಾರಿಯಾದರು.
ಹಿಂದಿನಿಂದ ಬಂದ ಜಿತೇಂದ್ರಕುಮಾರ ಗೆಳೆಯರಾದ ಪ್ರವೀಣ ಫಾರೇಖ, ಸಾಗರ ವಾಣಿಗೋತಾ, ಪ್ರವೀಣ ಭಂಡಾರಿ, ಕೈಲಾಶ ಬಂಢಾರಿ, ಧೀರಜ ಜೈನ್ ಇವರೆಲ್ಲರೂ ಸಂತೈಸಿ ಕುಡಿಯಲು ನೀರು ಕೊಟ್ಟರು. ಬಳಿಕ ಸುಧಾರಿಸಿಕೊಂಡ ಜಿತೇಂದ್ರಕುಮಾರ ಎಪಿಎಂಸಿ ಠಾಣೆಗೆ ಬಂದು ದೂರು ನೀಡಿದ್ದಾರಲ್ಲದೇ ಕಿರಾತಕರನ್ನು ಗುರುತಿಸುವುದಾಗಿ ತಿಳಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)