ಕಾಂಗ್ರೆಸ್ ಟಿಕೆಟ್ ಟೆಂಡರ್‌ನಲ್ಲಿ ಗೋಲ್‌ಮಾಲ್, ಕೆಪಿಸಿಸಿ ಕಾರ್ಯದರ್ಶಿ ಮಾರ್ಮಿಕ ಹೇಳಿಕೆ….ಇಲ್ಲಿದೆ ಡಿಟೇಲ್ಸ್
ಸರಕಾರ ನ್ಯೂಸ್ ವಿಜಯಪುರ
ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಕೆಪಿಸಿಸಿಯಿಂದ ಟೆಂಡರ್ ಕರೆಯಲಾಗಿತ್ತಂತೆ, 2 ಲಕ್ಷ ರೂಪಾಯಿ ಕೊಟ್ಟು ಆಕಾಂಕ್ಷಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದರಂತೆ, ಆದರೆ, ಟೆಂಡರ್‌ನಲ್ಲಿ ಗೋಲ್ ಮಾಲ್ ನಡೆದಿದೆ ಎಂಬ ಸಂಗತಿ ಇದೀಗ ಬಹಿರಂಗಗೊಂಡಿದೆ !
ಇದೇನಪ್ಪ ಹೊಸ ವರಸೆ ಅಂತೀರಾ? ಹೀಗೆ ಮಾರ್ಮಿಕವಾಗಿ ಟೀಕೆ ಮಾಡಿದ್ದು ಬೇರೆ ಯಾರೂ ಅಲ್ಲ, ಅವರೇ ಕೆಪಿಸಿಸಿಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಸಿ.ಎಸ್. ಇನಾಮದಾರ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಟಿಕೆಟ್ ಹಂಚಿಕೆಗೆ ಟೆಂಡರ್ ಕರೆಯಲಾಗಿತ್ತು, ನಾನು ಸಹ 2 ಲಕ್ಷ ರೂ.ಕೊಟ್ಟು ಟೆಂಡರ್‌ನಲ್ಲಿ ಭಾಗವಹಿಸಿದ್ದೆ, ಆದರೆ, ಹೊಂದಾಣಿಕೆ ಸೂತ್ರದಡಿ ನನಗೆ ಟಿಕೆಟ್ ತಪ್ಪಿಸಲಾಯಿತು, ಹೀಗಾಗಿ ಟೆಂಡರ್‌ನಲ್ಲಿ ಗೋಲ್‌ಮಾಲ್ ನಡೆದಿದ್ದು, ಇದರಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ನಗರ ಕ್ಷೇತ್ರದಿಂದ ಅರ್ಜಿ ಸಲ್ಲಿಸಿದವರ ಪೈಕಿ ನಾನೂ ಒಬ್ಬ. ಟಿಕೆಟ್ ಕೇಳಲು ಹೋದರೆ ಸಮೀಕ್ಷೆ ನಡೆಸಿ ಆ ಪ್ರಕಾರ ಟಿಕೆಟ್ ಹಂಚುವುದಾಗಿ ಹೇಳಿದರು. ಆದರೆ, ಕೆಲವರ ಹೊಂದಾಣಿಕೆ ರಾಜಕಾರಣದಿಂದಾಗಿ ಟಿಕೆಟ್ ನನ್ನ ಕೈತಪ್ಪಿತು. ಇದರಿಂದ ಬೇಸತ್ತು ಪಕ್ಷ ತೊರೆಯುತ್ತಿರುವುದಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಅಡ್ವೋಕೆಟ್‌ಗಳಿಗೆ ಭವಿಷ್ಯ ಇಲ್ಲ. ಅಡ್ವೋಕೇಟ್‌ಗಳಿಗೆ ಟಿಕೆಟ್ ನೀಡಲ್ಲ. ಯಾವುದೇ ಅಡ್ವೋಕೇಟ್‌ಗಳನ್ನು ಬೆಳೆಯಲು ಬಿಡಲ್ಲ. ಕೆಲವು ನಾಯಕರಿಗೆ ಅಲ್ಪಸಂಖ್ಯಾತರಲ್ಲಿ ಜಾಣರು ಇರಬಾರದು. ಇದೇ ಕಾರಣಕ್ಕೆ ಡಾ.ಮಕ್ಬುಲ್ ಬಾಗವಾನಗೆ ಟಿಕೆಟ್ ತಪ್ಪಿಸಲಾಯಿತು. ಈ ಹಿಂದೆ ಕಾಳಿಂಗಪ್ಪ ಚೌಧರಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ನಾನು ಪಕ್ಷವನ್ನು ಬೇರು ಮಟ್ಟದಿಂದ ಕಟ್ಟುವಲ್ಲಿ ಸಫಲನಾಗಿದ್ದೇನೆ. ಸತತ ನಾಲ್ಕು ಚುನಾವಣೆಗಳಲ್ಲಿ ಟಿಕೆಟ್ ಕೇಳುತ್ತಿದ್ದರೂ ನನಗೆ ಟಿಕೆಟ್ ನಿರಾಕರಿಸಲಾಗುತ್ತಿದೆ. ನನಗೆ ಟಿಕೆಟ್ ಸಿಕ್ಕಿದ್ದರೆ ಖಂಡಿತ ಗೆಲ್ಲುತ್ತಿದ್ದೆ. ಆದರೆ, ಗೆಲ್ಲಬಾರದೆಂದೇ ಅನ್ಯರಿಗೆ ಟಿಕೆಟ್ ನೀಡಲಾಯಿತು. ಇದೊಂದು ಷಡ್ಯಂತ್ರ ಎಂದರು.
ಕಾಂಗ್ರೆಸ್‌ನಲ್ಲಿ ಮುಸ್ಲಿಂರನ್ನು ಕಡೆಗಣಿಸಲಾಗುತ್ತಿದೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ನಾಯಕರನ್ನು ಬೆಳೆಯಕೊಡುತ್ತಿಲ್ಲ. ಈ ಹಿಂದೆ ರಾಜ್ಯದಲ್ಲಿ 20 ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಾಗುತ್ತಿತ್ತು. ಇದೀಗ 15 ಸ್ಥಾನಗಳಿಗೆ ಇಳಿಸಲಾಗಿದೆ. ಎರಡು ಲೋಕಸಭೆ ಕ್ಷೇತ್ರಗಳಿಗೆ ಈ ಹಿಂದೆ ಟಿಕೆಟ್ ನೀಡಲಾಗುತ್ತಿತ್ತು. ಆದರೆ ಈಗ ಆ ಪರಿಸ್ಥಿತಿ ಉಳಿದಿಲ್ಲ ಎಂದು ಇನಾಮದಾರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಅಲ್ಪಸಂಖ್ಯಾತರನ್ನು ಯಾರು ತುಳಿಯುತ್ತಿದ್ದಾರೆಂಬುದು ಬಿಕ್ಷುಕರು, ಆಟೋ ಚಾಲಕರಿಂದ ಹಿಡಿದು ಅನುಭವಿ ರಾಜಕಾರಣಿಗಳೆಲ್ಲರಿಗೂ ಗೊತ್ತು. ಆದರೆ, ಯಾರ ಮೇಲೂ ಗೂಬೆ ಕೂರಿಸಲು ಹೋಗಲ್ಲ. ಹೊಂದಾಣಿಕೆ ಸೂತ್ರದಡಿ ನಗರದಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಗೊತ್ತಿದ್ದೂ ಕೆಲವರು ಸುಮ್ಮನಿದ್ದಾರೆ. ನಾನು ಮಾತ್ರ ಪಕ್ಷ ತೊರೆಯುತ್ತಿದ್ದೇನೆ. ಇದರಿಂದ ಕಾಂಗ್ರೆಸ್‌ಗೆ ನಷ್ಟ ವಿನಃ ನನಗಲ್ಲ ಎಂದರು.
ಮುಖಂಡರಾದ ಮೌಲಾಲಿ ಬಸಂತಪುರ, ಎಂ.ಕೆ. ಕೆಂಭಾವಿ, ವಿಜಯ ಮಹೇಂದ್ರಕರ, ಆಸೀಫ್ ಗುಡ್ನಾಳ ಮತ್ತಿತರರಿದ್ದರು.