ವಿಧಾನ ಪರಿಷತ್ ಚುನಾವಣೆಯಲ್ಲಿ ಹಣ ಹಂಚಿಕೆ, ಚುನಾವಣೆ ಅಧಿಕಾರಿಗಳ ದಾಳಿ, 17.40 ಲಕ್ಷ ರೂ.ಪತ್ತೆ, ಹಣ ಯಾರಿಗೆ ಸೇರಿದ್ದು?
ಸರಕಾರ್ ನ್ಯೂಸ್ ವಿಜಯಪುರ
ವಿಧಾನ ಪರಿಷತ್ ಚುನಾವಣೆ ಹಿಂದಿನ ದಿನವೇ ಹಣ ಹಂಚಿಕೆ ಭರಾಟೆ ಜೋರಾಗಿದೆ !
ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಹಣಾಹಣಿ ಏರ್ಪಟ್ಟಿದ್ದು ಶತಾಯ ಗತಾಯ ಗೆಲ್ಲಲಬೇಕೆಂಬ ಜಿದ್ದಾಜಿದ್ದಿಯಲ್ಲಿ ವಾಮ ಮಾರ್ಗ ಅನುಸರಿಸುತ್ತಿರುವುದು ಕಂಡು ಬಂದಿದೆ.
ಇಲ್ಲಿನ ಗೋದಾವರಿ ಹೋಟೆಲ್ ಬಳಿ ವಾಹನದಲ್ಲಿ ಹಣ ಸಾಗಿಸುತ್ತಿದ್ದಾಗ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಫೋಟೊ ಹಾಗೂ ಹಣ ಸಿಕ್ಕಿದೆ.
ಒಟ್ಟು 17.40 ಲಕ್ಷ ರೂ.ಪತ್ತೆಯಾಗಿದ್ದು, ಒಂದೊಂದು ಪಾಕಿಟ್ ನಲ್ಲೂ10 ಸಾವಿರ ರೂ.ಸಿಕ್ಕಿದೆ. ಒಟ್ಟು 170 ಪಾಕೀಟ್ ಸಿಕ್ಕಿವೆ. ಆಮೂಲಕ ಕಾಂಗ್ರೆಸ್ ಒಂದು ಮತಕ್ಕೆ10 ಸಾವಿರ ರೂ. ಕೊಡುತ್ತಿರುವುದು ಬೆಳಕಿಗೆ ಬಂದಿದೆ.
ದಾಳಿ ಬಳಿಕ ಮಾಹಿತಿ ನೀಡಿರುವ ಚುನಾವಣೆ ಅಧಿಕಾರಿ (ಎಫ್.ಎಸ್.ಟಿ) ಎ.ಎಸ್. ಕೋಲಾರ, ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ. ಕನ್ನೂರನಿಂದ ಬರುವಾಗ ತಹಸೀಲ್ದಾರ್ ಕಚೇರಿಯಿಂದ ಕರೆ ಬಂತು. ವಾಹನವೊಂದರಲ್ಲಿ ಹಣ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ವಾಹನದಲ್ಲಿ ಒಟ್ಟು 17.40 ಲಕ್ಷ ರೂ.ಇದ್ದು ಕಾಂಗ್ರೆಸ್ ಅಭ್ಯರ್ಥಿಯ ಫೋಟೊ ಇವೆ ಎಂದಿದ್ದಾರೆ.
ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಕೂಡ ದಾಳಿಯನ್ನು ಖಚಿತಪಡಿಸಿದ್ದು ತನಿಖೆ ನಡೆಯುತ್ತಿದ್ದು ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.