ಎಮ್ಮೆ ಸಾಕಲು ಸಹಾಯಧನ ಕೇಳಿದರೆ ಲಂಚಕ್ಕೆ ಬೇಡಿಕೆ, ಸಹಾಯಕ ಅಭಿವೃದ್ಧಿ ಅಧಿಕಾರಿ ಎಸಿಬಿ ಬಲೆಗೆ
ವಿಜಯಪುರ: ಎಮ್ಮೆ ಸಾಕಲು ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದ ಫಲಾನುಭವಿಯಿಂದ ಲಂಚಕ್ಕೆ ಬೇಡಿಕೆ ಇರಿಸಿದ್ದ ಅಧಿಕಾರಿ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಸಹಾಯಕ ಅಭಿವೃದ್ಧಿ ಅಧಿಕಾರಿ ದಯಾನಂದ ಸಂಗಣ್ಣ ಬಿಲ್ಲಾಳ ಊರ್ಫ್ ಬಡಿಗೇರ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.
ಇಂಡಿ ತಾಲೂಕಿನ ಅಂಜುಟಗಿ ಗ್ರಾಮದ ಕಾಶಿಬಾಯಿ ಪರಮಾತ್ಮ ಮಡಿವಾಳ ಎಂಬುವರು ಹೈನುಗಾರಿಕೆ ಉದ್ಯೋಗ ಮಾಡಲು ಸಹಾಯಧನ ಮತ್ತು ಸಾಲ ಸೇರಿ 50 ಸಾವಿರ ರೂ.ಗಳಿಗೆ ಅರ್ಜಿ ಸಲ್ಲಿಸಿದ್ದರು. ಆ ಪ್ರಕಾರ ಫಲಾನುಭವಿಯಾಗಿ ಆಯ್ಕೆಯಾಗಿದ್ದರು. ಸಹಾಯಧನ ಹಾಗೂ ಸಾಲದ ಮೊತ್ತ ಬ್ಯಾಂಕ್ ಖಾತೆಗೆ ಹಾಕುವ ಸಂಬಂಧ ತನ್ನ ದಾಖಲೆಗಳನ್ನು ಮೇಲಾಧಿಕಾರಿಗಳಿಗೆ ಕಳುಹಿಸಲು ಅಧಿಕಾರಿ ದಯಾನಂದ 5 ಸಾವಿರ ರೂ.ಗಳಿಗೆ ಬೇಡಿಕೆ ಇರಿಸಿದ್ದನು. ಕೊನೆಗೆ 3 ಸಾವಿರಕ್ಕೆ ವ್ಯವಹಾರ ಕುದುರಿಸಿದ್ದನು.
ಇದರಿಂದ ಬೇಸತ್ತ ಫಲಾನುಭವಿ ಎಸಿಬಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು ವ್ಯವಸ್ಥಿತ ಕಾರ್ಯಾಚರಣೆ ನಡೆಸಿ ಲಂಚ ಸ್ವೀಕರಿಸುವಾಗ ಅಧಿಕಾರಿ ದಯಾನಂದನನ್ನು ಬಂಧಿಸಿದ್ದಾರೆ.