ನಂದಿಹಾಳ ಪಿಯು ಗ್ರಾಮದಲ್ಲಿ ಶಿಥಿಲಗೊಂಡ ಶಾಲೆ ಕಟ್ಟಡ, ಆತಂಕದಲ್ಲಿ ವಿದ್ಯಾರ್ಥಿಗಳು, ಶಿಕ್ಷಣಾಧಿಕಾರಿಗಳಿಗೆ ಗ್ರಾಮಸ್ಥರ ತರಾಟೆ…!
ಬ.ಬಾಗೇವಾಡಿ: ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದ್ದು, ಮಕ್ಕಳ ಜೀವಕ್ಕೆ ಕುತ್ತು ತರಲು ಹೊರಟಿವೆ !
ಇದಕ್ಕೆ ಪೂರಕ ಎಂಬಂತೆ ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿಯು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಮೇಲ್ಛಾವಣಿ ಕುಸಿಯುತ್ತಿದೆ.
ಕಟ್ಟಡ ಶಿಥಿಲಗೊಂಡಿದ್ದು ದುರಸ್ಥಿಗೆ ಆಗ್ರಹಿಸಿ ವಿದ್ಯಾರ್ಥಿಗಳು ಹಾಗೂ ಪಾಲಕರು ಗುರುವಾರ ಪ್ರತಿಭಟನೆ ನಡೆಸಿದರು.
ತರಗತಿಗಳನ್ನು ಬಹಿಷ್ಕರಿಸಿದ ಶಾಲಾ ವಿದ್ಯಾರ್ಥಿಗಳು ಕೂಡಲೇ ಕಟ್ಟಡ ದುರಸ್ಥಿ ಮಾಡಲು ಒತ್ತಾಯಿಸಿದರು. ಪಾಲಕರು ಸಹ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಾಥ್ ನೀಡಿದರು.
ಶಾಲಾ ಕಟ್ಟಡ ಶಿಥಿಲವಾಗಿದ್ದು, ಕುಸಿದು ಹೋದರೆ ಅನಾಹುತವಾಗಲಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು. ಇಲ್ಲವಾದರೆ ಅನಾಹುತದಲ್ಲಿ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಕಟ್ಟಡ ದುರಸ್ಥಿ ಕಾರ್ಯವನ್ನು ಕೈಗೊಳ್ಳಲು ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.