ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ, ನೀತಿ ಸಂಹಿತೆ ಬಗ್ಗೆ ಚುನಾವಣಾ ಅಧಿಕಾರಿ ಹೇಳಿದ್ದೇನು?
ಸರಕಾರ್ ನ್ಯೂಸ್ ವಿಜಯಪುರ
ವಿಜಯಪುರ: ಮಹಾನಗರ ಪಾಲಿಕೆ ಚುನಾವಣೆ ಅ. 28 ರಂದು ನಡೆಯಲಿದ್ದು, ಅ. 10 ರಿಂದಲೇ ಅಧಿಸೂಚನೆ ಪ್ರಕಟಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಈಗಾಗಲೇ ವೇಳಾಪಟ್ಟಿ ಪ್ರಕಟಗೊಂಡಿದೆ. ನಾಮ ಪತ್ರ ಸಲ್ಲಿಸುವ, ವಾಪಸ್ ಪಡೆಯುವ, ಮತದಾನಕ್ಕೆ ಸಂಬಂಧಿಸಿದ ವಿವರ ತಿಳಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಚುನಾವಣೆ ಆಯೋಗದ ನಿರ್ದೇಶನದ ಮೇರೆಗೆ ಪ್ರತಿ ಐದು ವಾರ್ಡ್ ಗೆ ಚುನಾವಣೆ ಅಧಿಕಾರಿ ಹಾಗೂ ಸಹಾಯಕ ಚುನಾವಣೆ ಅಧಿಕಾರಿಯನ್ನು ನೇಮಿಸಲಾಗಿದೆ ಎಂದರು.ವಾರ್ಡ್ ನಂ.1 ರಿಂದ 5ಕ್ಕೆ ಸಿ.ಬಿ. ದೇವರಮನಿ ಹಾಗೂ ಎಸ್.ಜಿ. ಪಾಟೀಲ, ವಾರ್ಡ್ ನಂ.6ರಿಂದ 10ಕ್ಕೆ ಪ್ರಕಾಶ ಚವಾಣ್ ಹಾಗೂ ಎಚ್.ಎಸ್. ಪಾಟೀಲ, ವಾರ್ಡ್ ನಂ.11 ರಿಂದ 15 ಕ್ಕೆ ಎಸ್.ವೈ. ಮಾರಿಹಾಳ ಹಾಗೂ ಎಂ.ಡಿ. ಚಬನೂರ ವಾರ್ಡ್ ನಂ.16 ರಿಂದ 20ಕ್ಕೆ ಕೆ. ಹೊಂಗಯ್ಯ ಹಾಗೂ ಗಣೇಶ ಪಟ್ಟಣಶೆಟ್ಟಿ, ವಾರ್ಡ್ ನಂ. 21 ರಿಂದ 25ಕ್ಕೆ ಕೆ.ಕೆ. ಚವಾಣ್ ಹಾಗೂ ರಮೇಶ ನಾಯಕ, ವಾರ್ಡ್ ನಂ.26 ರಿಂದ 30ರವರೆಗೆ ಈರಣ್ಣ ಆಶಾಪುರ ಹಾಗೂ ಜಿ.ಆರ್. ಹಿರೇಮಠ, ವಾರ್ಡ್ ನಂ.31 ರಿಂದ 35ಕ್ಕೆ ಮಹೇಶ ಮಾಲಗತ್ತಿ ಹಾಗೂ ಜಿ.ಎಸ್. ಹಿರೇಮಠ ಇವರನ್ನು ಅನುಕ್ರಮವಾಗಿ ಚುನಾವಣಾ ಅಧಿಕಾರಿ ಹಾಗೂ ಸಹಾಯಕ ಚುನಾವಣಾ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಮತಗಟ್ಟೆ ವಿವರ:
ವಿಜಯಪುರ ವಿಧಾನ ಸಭೆ ಕ್ಷೇತ್ರದಲ್ಲಿ
263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಾಗಠಾಣ ವಿಧಾನ ಸಭೆ ಕ್ಷೇತ್ರದ 45 ಮತಗಟ್ಟೆಗಳು ಹಾಗೂ ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ 2 ಮತಗಟ್ಟೆಗಳು ಸೇರಿ ಒಟ್ಟು 303 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 294173 ಮತದಾರರು ಇದ್ದಾರೆ.
ಮಾದರಿ ನೀತಿ ಸಂಹಿತೆ:
ಅ.10 ರಿಂದ 31 ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಈ ಸಂಹಿತೆ ಜಾರಿಯಲ್ಲಿರಲಿದೆ. ಡಿಯುಡಿಸಿ ಯೋಜನಾ ನಿರ್ದೇಶಕ ರಾಜಶೇಖರ ಡಂಬಳ (ಮೊ.,8861308444) ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿದ್ಯುನ್ಮಾನ ಮತಯಂತ್ರ ಬಳಕೆ:
ಚುನಾವಣೆಯಲ್ಲಿ ವಿದ್ಯುನ್ಮಾಮ ಮತಯಂತ್ರಗಳನ್ನು ಬಳಕೆ ಮಾಡಲಾಗುವುದು. ಬ್ಯಾಲೆಟ್ ಯುನಿಟ್ – 303, ಕಂಟ್ರೋಲ್ ಯುನಿಟ್ – 303, ಕಾಯ್ದಿರಿಸಿದ ಬಿಮಯು- 65, ಸಿ.ಯು.- 65 ಹೀಗೆ ಒಟ್ಟು ಬಿ.ಯು. 368, ಸಿ.ಯು- 368 ಅವಶ್ಯಕತೆ ಇದೆ. ಸದ್ಯ ಬಿ.ಯು- 641, ಸಿ.ಯು- 667 ಲಭ್ಯವಿರುತ್ತವೆ ಹಾಗೂ ಚುನಾವಣೆ ಮತಪತ್ರದಲ್ಲಿ ನೋಟಾ ಇರಲಿದೆ ಎಂದರು.
ಎಸ್ ಪಿ ಎಚ್.ಡಿ. ಆನಂದಕುಮಾರ ಮಾತನಾಡಿ, ಯಾವುದೇ ಅಡೆತಡೆ ಇಲ್ಲದಂತೆ ಚುನಾವಣೆ ಪ್ರಕ್ರಿಯೆ ನಡೆಸಲು ಪೊಲೀಸ್ ಇಲಾಖೆ ಸರ್ವ ಸನ್ನದ್ದವಾಗಿದೆ. 37 ಬೂತ್ ಅತೀ ಸೂಕ್ಷ್ಮ, 80 ಸೂಕ್ಷ್ಮ, 186 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 27 ಮೊಬೈಲ್ ಸೆಕ್ಟರ್ ಸ್ಥಾಪಿಸಲಾಗಿದೆ. ಮೊಬೈಲ್ ಸ್ಕ್ವಾಡ್ ಇರಲಿದ್ದು, ಅದನ್ನು ಸೂಪರ್ ವೈಸರ್ ಮಾಡಲು ಏರ್ಪಾಡು ಮಾಡಿಕೊಳ್ಳಲಾಗಿದೆ ಎಂದರು.
ಓರ್ವ ಎಎಸ್ ಪಿ, 4 ಡಿವೈಎಸ್ ಪಿ
ಒಂಭತ್ತು ಸಿಪಿಐ, 27 ಪಿಎಸ್ ಐ ಸೇರಿ ಒಟ್ಟು 700 ಕ್ಕೂ ಅಧಿಕ ಸಿಬ್ಬಂದಿ ನೇಮಿಸಲಾಗಿದೆ. ಯಾವುದೇ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದ ರೀತಿ ಚುನಾವಣೆ ಪ್ರಕ್ರಿಯೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮತ್ತಿತರರಿದ್ದರು.