ಎಸ್ ಸಿ- ಎಸ್ ಟಿ ಮೀಸಲು ಹೆಚ್ಚಳಕ್ಕೆ ಖುಷಿ ಪಡದಿರಿ, ಇದು ಕಾಲುಭಾಗ ಮಾತ್ರ ಪೂರ್ಣ, ಇನ್ನೂ ಏನೇನು ಆಗಬೇಕು ಗೊತ್ತಾ?
ಸರಕಾರ್ ನ್ಯೂಸ್ ಮೊಳಕಾಲ್ಮುರ
ರಾಜ್ಯ ಸರ್ಕಾರ ನಾಗಮೋಹನದಾಸ ವರದಿಯಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿರುವುದು ಒಟ್ಟು ಪ್ರಕ್ರಿಯೆಯ ಕಾಲುಭಾಗ ಮಾತ್ರ ಪೂರ್ಣಗೊಂಡಂತಾಗಿದೆ. ಇನ್ನೂ ಸಾಕಷ್ಟು ಪ್ರಕ್ರಿಯೆ ಆಗಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
ಭಾನುವಾರ ಮೊಳಕಾಲ್ಮೂರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಸಂಪುರ ಸಭೆಯ ನಂತರ ವಿಧಾನ ಸಭೆ ಚಳಿಗಾಲ ಅಧಿವೇಶನದಲ್ಲಿ ಒಪ್ಪಿಗೆ, ಲೋಕಸಭೆಯಲ್ಲಿ ಒಪ್ಪಿಗೆ ನಂತರ ಅಂತಿಮವಾಗಿ ರಾಷ್ಟ್ರಪತಿ ಅಂಕಿತ ಸಿಕ್ಕಾಗ ಮಾತ್ರ ಮೀಸಲಾತಿ ಹೆಚ್ಚಳ ಜಾರಿಯಾಗಲಿದೆ. ಈಗಾಗಲೇ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಬಿಜೆಪಿ ಇನ್ನೂ ನಾಲ್ಕು ಬಾರಿ ಸಿಹಿ ಹಂಚಿದರಷ್ಡೇ ಕಾಯ್ದೆ ಜಾರಿಯಾಗಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದರು.
ವಾಲ್ಮೀಕಿ ಪೀಠದ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಧರಣಿ ನಡೆಸಿ, ಜಯಂತಿ ಬಹಿಷ್ಕಾರ ಹಾಕುವ ನಿರ್ಧಾರ ಕೈಗೊಂಡಿದ್ದರಿಂದ ಇದಕ್ಕೆ ಹೆದರಿದ ಸರ್ಕಾರ ತರಾತುರಿಯಲ್ಲಿ ಸಂಪುಟ ಸಭೆ ಕರೆದು ಮೀಸಲಾತಿ ಹೆಚ್ಚಳ ಮಾಡಿದೆ. ಇಷ್ಟಕ್ಕೆ ನಾವು ಸರ್ಕಾರ ವನ್ನು ಅಭಿನಂದಿಸುವುದಿಲ್ಲ. ರಾಷ್ಟ್ರಪತಿ ಅಂಕಿತ ಬಿದ್ದ ಮೇಲೆ ಅಭಿನಂದಿಸುತ್ತೇವೆ ಎಂದರು.
ನೆರೆಯ ತೆಲಂಗಾದಲ್ಲಿ ಸಹ ಇದೇ ರೀತಿ ಮೀಸಲಾತಿ ಹೆಚ್ಚಳವನ್ನು 2017 ರಲ್ಲಿ ಕೈಗೊಂಡಿತು. ಆದರೆ ಕೇಂದ್ರ ಸರ್ಕಾರ ಈವರೆಗೂ ಒಪ್ಪಿಗೆ ನೀಡಿಲ್ಲ. ಹೀಗಾಗಿ ಇದು ಚುನಾವಣೆ ತಂತ್ರವಾಗಿದ್ದು ಸಮುದಾಯದ ಜನ ಇದನ್ನು ನಂಬಿ ಮೋಸ ಹೋಗಬಾರದು ಎಂದು ಮನವಿ ಮಾಡಿದರು.