ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಸಿಹಿ ಸುದ್ದಿ, ಬೆಂಗಳೂರಿನಲ್ಲಿ ಸರ್ವಪಕ್ಷ ಸಭೆ, ಅಂತಿಮ ನಿರ್ಣಯ ಏನು?
ಸರಕಾರ್ ನ್ಯೂಸ್ ಬೆಂಗಳೂರ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿಗಾಗಿ ರಚಿಸಿರುವ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ಸಮಿತಿ ವರದಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಿಧಾನ ಮಂಡಲದ ಉಭಯ ಸದನಗಳ ನಾಯಕರ ಸಭೆ ನಡೆಯಿತು.
ಪರಿಶಿಷ್ಟ ಜಾತಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7 ಮೀಸಲಾತಿ ಹೆಚ್ಚಳ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಮುಂಬರುವ ಡಿಸೆಂಬರ್‌ನ ವಿಧಾನ ಮಂಡಲ ಅಧಿವೇಶನದಲ್ಲಿ ಆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಏನಿದು ಮೀಸಲು ವಿಚಾರ?
ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆಂಬುದು ಮೊದಲಿನಿಂದಲೂ ಬೇಡಿಕೆ ಇತ್ತು. ಈಗಾಗಲೇ ಕೇಂದ್ರದಲ್ಲಿ ಪರಿಶಿಷ್ಟ ಜಾತಿಗೆ ಶೇ. 15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ. 7.5 ಸೇರಿ ಒಟ್ಟು 22.5 ಮೀಸಲಾತಿ ಇದೆ. ಕರ್ನಾಟಕದಲ್ಲಿ ಎಸ್‌ಸಿಗೆ 15 ಹಾಗೂ ಎಸ್‌ಟಿಗೆ ಶೇ. 3 ರಷ್ಟು ಮೀಸಲಾತಿ ಇದೆ. ಒಟ್ಟು ಶೇ. 18 ರಷ್ಟು ಮೀಸಲಾತಿ ಇದೆ. ಕೇಂದ್ರ ಹಾಗೂ ರಾಜ್ಯದ ನಡುವೆ ಶೇ.4.5 ಮೀಸಲಾತಿ ವ್ಯತ್ಯಾಸ ಇದೆ. ಹೀಗಾಗಿ ಈ ಅಸಮಾನತೆ ಹೋಗಲಾಡಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು.
ಆ ಹಿನ್ನೆಲೆ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ನಾಗಮೋಹನದಾಸ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಜುಲೈ 2020ರಲ್ಲಿ ವರದಿ ಸಲ್ಲಿಸಿದೆ. ಆ ವರದಿ ಪ್ರಕಾರ ಎಸ್‌ಟಿಗೆ ಶೇ.7 ಹಾಗೂ ಎಸ್‌ಸಿಗೆ ಶೇ.17 ರಷ್ಟು ಮೀಸಲಾತಿ ಹೆಚ್ಚಿಸಬೇಕಿದ್ದು, ಅದಕ್ಕಾಗಿ ಸಾಕಷ್ಟು ಹೋರಾಟ ಹಮ್ಮಿಕೊಳ್ಳಲಾಗಿತ್ತು. ಪ್ರತಿಫಲವಾಗಿ ಇದೀಗ ಸಿಎಂ ಬಸವರಾಜ ಬೊಮ್ಮಾತಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆದು ಅಂತಿಮ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ವಿಧಾನ ಮಂಡಲ ಅಧಿವೇಶನದಲ್ಲಿ ಅದಕ್ಕೊಂದು ಸ್ಪಷ್ಟ ರೂಪುರೇಷೆ ಸಿಗಲಿದೆ.
ಸಭೆಯಲ್ಲಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವರಾದ ಆರ್.ಅಶೋಕ, ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಆನಂದ ಸಿಂಗ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಶಾಸಕರಾದ ಯು.ಟಿ. ಖಾದರ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಭೋಜೇಗೌಡ, ಅಜಯ್ ಧರ್ಮ ಸಿಂಗ, ಮಾಜಿ ಶಾಸಕ ವಿ.ಎಸ್. ಉಗ್ರಪ್ಪ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.