ಕಾಂಗ್ರೆಸ್ ಬ್ಯಾಂಕ್ ಖಾತೆ ಸೀಜ್, ಇದು ಬಿಜೆಪಿಯದ್ದೇ ಕುತಂತ್ರವಾ? ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ಸರಕಾರ ನ್ಯೂಸ್ ಬೆಂಗಳೂರು
ಸೋಲಿನ ಭಯದಲ್ಲಿ ಕಾಂಗ್ರೆಸ್ ಬ್ಯಾಂಕ್ ಖಾತೆಗಳನ್ನು ಬಿಜೆಪಿ ಸೀಜ್ ಮಾಡಿದೆ. ಈ ಬಾರಿ ಬಿಜೆಪಿಯನ್ನು ದೇಶದ ಜನ ಸ್ಪಷ್ಟವಾಗಿ ತಿರಸ್ಕರಿಸಿ ಭಾರತವನ್ನು ಉಳಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬ್ರಿಟೀಷರನ್ನು ಭಾರತದಿಂದ ಓಡಿಸಲು ಸುದೀರ್ಘ ಹೋರಾಟ ನಡೆಸಿ ಹುತಾತ್ಮರಾದ, ಜೈಲು ಸೇರಿದ ಚರಿತ್ರೆ ಇರುವ ಪಕ್ಷ ಕಾಂಗ್ರೆಸ್. ಬಿಜೆಪಿ ನಮಗೆ ಎಷ್ಟೇ ತೊಂದರೆ ಕೊಟ್ಟರೂ ಕಾಂಗ್ರೆಸ್ ಕಾರ್ಯಕರ್ತರು ಹೋರಾಟದ ಹಾದಿಯಲ್ಲೇ ಎಲ್ಲವನ್ನೂ ಎದುರಿಸಲಿದ್ದಾರೆ ಎಂದರು.
ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯ ಅಂತಿಮ. ಕಾಂಗ್ರೆಸ್ ಜನರಿಂದ ಹಣ ಸಂಗ್ರಹಿಸಿದೆ. ಜನರು ಸ್ವಯಂಪ್ರೇರಿತವಾಗಿ ಕೊಟ್ಟ ಹಣ ಕಾಂಗ್ರೆಸ್ ಖಾತೆಯಲ್ಲಿತ್ತು. ಸಣ್ಣ ತಾಂತ್ರಿಕ ಕಾರಣ ನೀಡಿ ಇಡೀ ಖಾತೆಯನ್ನು ಸೀಜ್ ಮಾಡಿರುವುದು ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಚುನಾವಣೆ ನಡೆಸದಂತೆ ಬಿಜೆಪಿ ಈ ರೀತಿಯ ತೊಂದರೆ ಕೊಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಇದು ಖಂಡನೀಯ ಎಂದರು.
*ಮನುಸ್ಮೃತಿಯ ಮಾರಕ ಮನಸ್ಥಿತಿ*
ಬಿಜೆಪಿ ಮನುಸ್ಮೃತಿಯ ಮಾರಕ ಮನಸ್ಥಿತಿಯನ್ನು ಹೊಂದಿದೆ. ಹೀಗಾಗಿ ಬಿಜೆಪಿಗೆ ಅಸಮಾನತೆ ಇರಬೇಕು, ಜಾತಿ ವ್ಯವಸ್ಥೆ ಗಟ್ಟಿಯಾಗಬೇಕು, ನಿರುದ್ಯೋಗ ಹೆಚ್ಚಾಗಬೇಕು, ರೈತರ ಸಮಸ್ಯೆಗಳಿಗೆ ಪರಿಹಾರ ಸಿಗಬಾರದು. ಈ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಬಾರದು ಎನ್ನುವ ಮನಸ್ಥಿತಿ ಬಿಜೆಪಿಯದ್ದಾಗಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷಕ್ಕೆ ಹಣ ಇಲ್ಲದಂತೆ ಮಾಡಲು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲಾಗಿದೆ ಎಂದರು.
ಸಿಎಎ, ಪುಲ್ವಾಮಾ, ಅಯೋಧ್ಯೆ ಹೆಸರಲ್ಲಿ ಇನ್ನೂ ಎಷ್ಟು ವರ್ಷ ಭಾರತೀಯರನ್ನು ಭಾವನಾತ್ಕವಾಗಿ ಮರಳು ಮಾಡ್ತೀರಿ? ಜನರ ಬದುಕಿನ ಸಮಸ್ಯೆಗಳಿಗೆ ನೆಪಕ್ಕೂ ಸ್ಪಂದಿಸದ ನೀವು ಕೇವಲ ಭಾವನಾತ್ಮಕವಾಗಿ ಕೆರಳಿಸುತ್ತಾ ಇದ್ದೀರಿ. ಆದರೆ ಭಾರತದ ಜನತೆ ನಿಮ್ಮನ್ನು ಈ ಬಾರಿ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ ಎಂದರು.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಉಪಸ್ಥಿತರಿದ್ದರು.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)