ರಾಜ್ಯ

ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ಎಚ್ಚರ…..! ನಿವೇಶನ ಪಡೆಯುವ ಮುನ್ನ ಈ ನಿಯಮಾವಳಿಗಳ ಅರಿವಿರಲಿ…..!

ಸರಕಾರ ನ್ಯೂಸ್‌ ಬೆಂಗಳೂರ

ರಾಜ್ಯದಲ್ಲಿ ಇತ್ತೀಚೆಗೆ ಗೃಹ ನಿರ್ಮಾಣ ಸಹಕಾರ ಸಂಘಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಇಂಥ ಸಂಘಗಳಿಂದ ನಿವೇಶನ ಖರೀದಿಸಿ ಬಳಿಕ ಪರದಾಡುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ನಿವೇಶನ ಖರೀದಿ ಮತ್ತು ಹಂಚಿಕೆಗೂ ಮುನ್ನ ಸರ್ಕಾರದ ಕೆಲವು ನಿಯಮಾವಳಿ ತಿಳಿಯಬೇಕಿರುವುದು ಅತ್ಯವಶ್ಯ.

ಅಂದಹಾಗೆ, ಕಳೆದ ವಿಧಾನ ಸಭೆ ಅಧಿವೇಶನದಲ್ಲಿ ಈ ಬಗ್ಗೆ ಸಮಗ್ರ ಚರ್ಚೆಯಾಗಿದ್ದು, ಶಾಸಕ ಉಮಾನಾಥ ಎ.ಕೋಟ್ಯಾನ್‌ ಕೂಡ ಇಂಥ ಗೃಹ ನಿರ್ಮಾಣ ಸಹಕಾರ ಸಂಘಗಳ ಬಗ್ಗೆ ಸಮಗ್ರ ಮಾಹಿತಿ ಪಡೆದಿದ್ದಾರೆ.

ರಾಜ್ಯದಲ್ಲಿರುವ ಗೃಹ ನಿರ್ಮಾಣ ಸಹಕಾರ ಸಂಘಗಳು ನಿವೇಶನಗಳ ಹಂಚಿಕೆಯಲ್ಲಿ ಮಾಡುತ್ತಿರುವ ವಿಳಂಬ ಮತ್ತು ನೈಜ ಸದಸ್ಯರುಗಳಿಗೆ ನಿವೇಶನ ಹಂಚಿಕೆಯಲ್ಲಿ ವಿವಿಧ ರೀತಿಯ ಅನಾನುಕೂಲ ಮಾಡಿಕೊಡುವ ಪ್ರಕರಣಗಳನ್ನು ಇಲಾಖೆವಾರು ಕಟ್ಟು ನಿಟ್ಟಾಗಿ ಗಮನಿಸುವ ಅವಶ್ಯಕತೆ ಇರುತ್ತದೆ. ನೈಜ ಸದಸ್ಯರ ಪಟ್ಟಿ ಮಾಡಲುಇಲಾಖೆ ವಿಧಿಸಿರುವ ನಿಯಮಾವಳಿಗಳು ಯಾವವು? ಅವುಗಳ ಅನುಷ್ಟಾನದ ಲೋಪದೋಷಗಳ ಬಗ್ಗೆ ಪ್ರಶ್ನಿಸಿದ್ದಾರೆ.

ಗೃಹ ನಿರ್ಮಾಣ ಸಹಕಾರ ಸಂಘಗಳ ಅವ್ಯವಹಾರ, 72 ಸಂಘಗಳ ವಿರುದ್ಧ ದೂರು ದಾಖಲು….!

ಈ ಬಗ್ಗೆ ಸಹಕಾರಿ ಸಚಿವ ಕೆ.ಎನ್‌. ರಾಜಣ್ಣ ಸಮಗ್ರ ಮಾಹಿತಿ ನೀಡಿದ್ದು, ಯಾವುದೇ ಒಂದು ಗೃಹ ನಿರ್ಮಾಣ ಸಹಕಾರ ಸಂಘವು ಬಡಾವಣೆ ರಚಿಸುವ ಸಂಬಂಧ ಸದಸ್ಯರನ್ನು ನೋಂದಾಯಿಸಿಕೊಂಡು ಕಾಲ ಕಾಲಕ್ಕೆ ಸಂಗ್ರಹಿಸುವ ನಿವೇಶನ ಠೇವಣಿಯನ್ನಾಧರಿಸಿ ನಿವೇಶನಾಕಾಂಕ್ಷಿ ಸದಸ್ಯರ ಜೇಷ್ಠತಾ ಪಟ್ಟಿ ತಯಾರಿಸಬೇಕಾಗುತ್ತದೆ. ಅಂಥ ಜೇಷ್ಠತಾ ಪಟ್ಟಿಯನ್ನು ಸಹಕಾರ ಸಂಘಗಳ ನಿಬಂಧಕರ ಅನುಮೋದನೆಗೆ ಸಲ್ಲಿಸಬೇಕಾಗಿರುತ್ತದೆ. ಈ ರೀತಿ ಸಹಕಾರ ಸಂಘಗಲಿಂದ ಸ್ವೀಕೃತವಾದ ಪ್ರಸ್ತಾವನೆಗಳನ್ನು ನಿಬಂಧಕರು ಸಂಘದ ವ್ಯಾಪ್ತಿಯ ಒಬ್ಬ ಅಧಿಕಾರಿಯಿಂದ ಪರಿಶೀಲನೆಗೆ ಒಳಪಡಿಸಿ ಸಂಘವು ಸಲ್ಲಿಸಿರುವ ಪ್ರಸ್ತಾವನೆಯನ್ನು ಸಂಘದ ದಾಖಲೆಗಳೊಡನೆ ಕೂಲಂಕಷವಾಗಿ ಪರಿಶೀಲಿಸಿ ಪರಿಶೀಲನಾಧಿಕಾರಿಯು ದೃಢೀಕರಿಸಿ ಸಲ್ಲಿಸಿದ ಜೇಷ್ಠತಾ ಪಟ್ಟಿಯನ್ನು ನಿಬಂಧಕರು ಅನುಮೋದನೆ ಮಾಡಿಕೊಡುವ ಪದ್ಧತಿ ಜಾರಿಯಲ್ಲಿದೆ ಎಂದಿದ್ದಾರೆ.

ಈ ಪದ್ಧತಿಯನ್ನು ಕರ್ನಾಟಕ ಸಹಾರ ಸಂಘಗಳ ಕಾಯ್ದೆ 1959 ರ ಕಲಂ 30(ಬಿ) ಅವಕಾಶಗಳ ರೀತ್ಯ ಸರ್ಕಾರದ ಆದೇಶ ಸಂಖ್ಯೆ: ಸಿಒ/105/ಸಿಎಲ್‌ಎಂ/2010, ದಿನಾಂಕ: 20-11-2010ರಂದು ಹೊರಡಿಸಿರುವ ಆದೇಶದ ಮತ್ತು ಕಾಲಕಾಲಕ್ಕೆ ಹೊರಡಿಸಲಾದ ಸುತ್ತೋಲೆಗಳ ರೀತ್ಯಾ ಜಾರಿಗೊಳಿಸಲಾಗುತ್ತಿದೆ.

ಯಾವುದೇ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ನಿವೇಶನ ಠೇವಣಿಯನ್ನು ಪಾವತಿಸಿರುವ ಸದಸ್ಯರಿಗೆ, ಸಂಘವು ನಿವೇಶನ ಒದಗಿಸದೇ ಇದ್ದಲ್ಲಿ, ಬಾಧಿತ ಸದಸ್ಯರು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 70ರ ಅವಕಾಶಗಳ ರೀತ್ಯಾ ವ್ಯಾಪ್ತಿಯ ನಿಬಂಧಕರಲ್ಲಿ ವ್ಯಾಜ್ಯ ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಸಂದರ್ಭದಲ್ಲಿ ನಿಬಂಧಕರು ಅನುಮೋದಿಸಿರುವ ಜೇಷ್ಠತಾ ಪಟ್ಟಿಯನ್ನು ಸಹ ಸಕ್ಷಮ ನ್ಯಾಯಾಲಯದಲ್ಲಿ ಪ್ರಶ್ನಿಸಿ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ ಎಂದಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!