ಜಿಪಂ ಸಿಇಒ ಕಾರ್ಯವೈಖರಿಗೆ ಮೆಚ್ಚುಗೆ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ಶಶಿಧರ ಕೋಸುಂಬೆ ಹೇಳಿದ್ದೇನು ಗೊತ್ತಾ?
ಸರಕಾರ ನ್ಯೂಸ್ ವಿಜಯಪುರ
ಚೇತನ ಸಂಜೆ, ಬಿಸಿಯೂಟ ಸಿಬ್ಬಂದಿಗೆ ಸಮವಸ್ತ್ರ ವಿತರಣೆ ಹಾಗೂ ಬಾಧಿತ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ ಕಾರ್ಯವೈಖರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸುಂಬೆ ಶ್ಲಾಘನೀಯ ವ್ಯಕ್ತಪಡಿಸುತ್ತಾ, ಸಿಇಒ ರಾಹುಲ್ ಶಿಂಧೆ ಕಾರ್ಯವೈಖರಿ ರಾಜ್ಯಕ್ಕೆ ಮಾದರಿ ಎಂದಿದ್ದಾರೆ.
ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಕ್ಕಳ ಕಲ್ಯಾಣಕ್ಕೆ ಕೈಗೊಂಡ ಕಾರ್ಯಕ್ರಮ ಗಳನ್ನು ಪರಿಶೀಲಿಸಲಾಗಿ ವಿಜಯ ಪುರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ತಮ ಕೆಲಸಗಳಾಗಿವೆ ಎಂದರು.
ಚೇತನ ಸಂಜೆ ಕಾರ್ಯಕ್ರಮದಡಿ ವಸತಿ ನಿಲಯಗಳ ಮಕ್ಕಳಿಗೆ ಉಚಿತವಾಗಿ ಆನ್ ಲೈನ್ ತರಬೇತಿ ನೀಡಲಾಗುತ್ತಿದೆ. ಇದರಿಂದ ಫಲಿತಾಂಶ ಸುಧಾರಿಸಲು ಸಹಕಾರಿಯಾಗಿದೆ. ಇನ್ನು ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿದೆ. ಇನ್ನು ಬಿಸಿಯೂಟ ಕಾರ್ಯಕ್ರಮ ದಡಿ ಯಾವುದೇ ತೊಂದರೆ ಉಂಟಾಗದಂತೆ ಮುಂಜಾಗೃತ ಕ್ರಮವಾಗಿ ಸಮವಸ್ತ್ರ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.
ಇನ್ನು ಜಿಲ್ಲಾದ್ಯಂತ ಹಲವು ಅಂಗನವಾಡಿ, ವಸತಿ ನಿಲಯಗಳು, ಶಾಲೆಗಳಿಗೆ ಭೇಟಿ ನೀಡಲಾಗಿದ್ದು ಕೆಲವು ಸಮಸ್ಯೆಗಳು ಕಂಡು ಬಂದಿವೆ. ಕೂಡಲೇ ಅವುಗಳನ್ನು ಸರಿಪಡಿಸಲು ಸೂಚಿಸಲಾಗಿದೆ. ಅಂಗನವಾಡಿ ಮಕ್ಕಳಿಗೆ ಮೊಟ್ಟೆ ವಿತರಣೆ ವೇಳೆ ಕಳಪೆ ಮೊಟ್ಟೆ ವಿತರಿಸುವ ಆರೋಪವಿದ್ದು ಕೂಡಲೇ ಕ್ರಮ ವಹಿಸುವಂತಡ ಸೂಚಿಸಲಾಗಿದೆ. ಅದರಂತೆ ಬಾಲ್ಯವಿವಾಹ, ಮಕ್ಕಳ ಕಳ್ಳತನ ಪ್ರಕರಣ, ಶಾಲೆ ಬಿಟ್ಟ ಮಕ್ಕಳ ಮಾಹಿತಿ ಕಲೆ ಹಾಕುವುದು ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಲಲು ಸೂಚಿಸಲಾಗಿದೆ ಎಂದರು.
ನ್ಯಾಯಾಧೀಶ ಸಂತೋಷ ಕುಂದರ ಮಾತನಾಡಿ, ಶಾಲೆಗಳ ಹತ್ತಿರ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧವಿದ್ದು ಆ ನಿಟ್ಟಿನಲ್ಲಿ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದಕ್ಕಾಗಿಯೇ ಇರುವ ಕೊಟ್ಪಾ ಕಾಯ್ದೆ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಎಎಸ್ ಪಿ ಶಂಕರ ಮಾರಿಹಾಳ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಚವಾಣ್ ಮತ್ತಿತರರಿದ್ದರು.