ವಿಜಯಪುರ

ಸಂಸದ ರಮೇಶ ಜಿಗಜಿಣಗಿ ವಿರುದ್ಧ ಅನಾಮಿಕರಿಂದ ಅಪಪ್ರಚಾರ, ದೂರು ದಾಖಲಿಸಲು ಕ್ರಮ !

ಸರಕಾರ ನ್ಯೂಸ್ ವಿಜಯಪುರ

ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಕೆಲವು ದುಷ್ಠರು ನನ್ನ ವಿರುದ್ಧ ಷಡ್ಯಂತ್ರ ರೂಪಿಸಿರುವುದಲ್ಲದೇ ಅನಾಮಿಕ ಮೊಬೈಲ್ ನಂಬರ್ ಬಳಸಿ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರ ಮೇಲೆ ದೂರು ನೀಡಲು ಸಜ್ಜಾಗಿರುವುದಾಗಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.

ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿಗಳಿಗೆ ಮೊ.9606016039 ಸೇರಿದಂತೆ ವಿವಿಧ ನಂಬರ್‌ಗಳಿಂದ ಕರೆ ಮಾಡಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಈ ರೀತಿ ಮೊಬೈಲ್ ಕರೆ ಬಂದಿವೆ ಎಂದು ಜಿಲ್ಲೆಯ ನಾನಾ ಭಾಗಗಳಿಂದ ಬಿಜೆಪಿ ಮತ್ತು ಇತರ ಪಕ್ಷಗಳ ಜನಪ್ರತಿನಿಧಿಗಳೂ ನನಗೆ ಮಾಹಿತಿ ನೀಡಿದ್ದಾರೆ. ಇಂಥ ಚಿಲ್ಲರೆ ರಾಜಕಾರಣ ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬೇನಾಮಿ ಹೆಸರಿನಲ್ಲಿ ಸಮೀಕ್ಷೆ ಮತ್ತಿತರ ಚಟುವಟಕಿಗೆಳ ನೆಪದಲ್ಲಿ ಇವರು ಮಾಡುತ್ತಿರುವ ಇಂಥ ನಾಟಕಗಳಗೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಜಿಗಜಿಣಗಿ ತಿಳಿಸಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಸಕ್ರೀಯ ರಾಜಕಾರಣದಲ್ಲಿರುವ ನನ್ನ ಹೆಸರಿಗೆ ಮಸಿ ಬಳಿಯುವ ಇಂಥ ಪ್ರಯತ್ನ ಎಂದಿಗೂ ಸಫಲವಾಗುವುದಿಲ್ಲ. ಇಂಥ ಕುತಂತ್ರಗಳಿಗೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಬಸವನಾಡು ವಿಜಯಪುರ ಜಿಲ್ಲೆಯ ಜನ ಯಾವತ್ತೂ ದುರುಳರ ತಂತ್ರಗಳಿಗೆ ಮರಳಾಗುವುದಿಲ್ಲ. ಇಂಥ ಸವಾಲುಗಳು ನನಗೆ ಹೊಸದಲ್ಲ. ಯಾರು ಏನೇ ಮಾಡಿದರೂ ನನ್ನ ಪಕ್ಷದ ಮುಖಂಡರು, ಕಾರ್ಯಕರ್ತರು, ನನ್ನ ಅಭಿಮಾನಿಗಳು, ನನ್ನ ಹಿತೈಷಿಗಳು ಸದಾ ನನ್ನೊಂದಿಗಿದ್ದಾರೆ. ಅವರ ಆಶೀರ್ವಾದವೇ ನನಗೆ ಶ್ರೀರಕ್ಷೆಯಾಗಿದೆ.

ಅಣ್ಣ ಬಸವಣ್ಣ, ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವ ಸಿದ್ಧಾಂತದಡಿ ಈ ಹಿಂದೆ, ಈಗ ಮತ್ತು ಮುಂದೆಯೂ ಜನಸೇವೆ ಮುಂದುವರೆಸುತ್ತೇನೆ. ಯಾರೂ ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡುವುದಾಗಿ ಸಂಸದ ರಮೇಶ ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!