ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆದರೆ ಕ್ರಮ, ಡಿಸಿ ಭೂಬಾಲನ್ ಖಡಕ್ ಸಂದೇಶ ರವಾನೆ
ಸರಕಾರ ನ್ಯೂಸ್ ವಿಜಯಪುರ
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ನೋಂದಾಯಿಸುವ ಪ್ರಕ್ರಿಯೆಯು ಉಚಿತವಾಗಿದ್ದು, ಹಣ ಪಡೆದು ನೋಂದಣಿ ಮಾಡುವ ಕೇಂದ್ರಗಳ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದೆಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಎಚ್ಚರಿಕೆ ನೀಡಿದ್ದಾರೆ.
ಶಿರಬೂರ ಗ್ರಾಮದ ಗ್ರಾಮ ಒನ್ ಸೇವಾ ಕೇಂದ್ರದಲ್ಲಿ ಹಣ ಪಡೆದು ನೋಂದಣಿ ಮಾಡಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸಂಬಂಧಿಸಿದ ತಹಶೀಲ್ದಾರರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇಂದು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲ್ಯಾಮಿನೇಶನ್ ಮಾಡಿರುವುದಕ್ಕೆ ಹಣ ಪಡೆಯಲಾಗಿದೆ ಎಂದು ವರದಿ ಸಲ್ಲಿಸಿದ್ದಾರೆ. ಆದಾಗ್ಯೂ, ಈ ಕೇಂದ್ರದ ಲಾಗಿನ್ ಹಾಗೂ ಪಾಸವರ್ಡ್ ವಿವರ ನಿಷ್ಕ್ರೀಯಗೊಳಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳ ಮೊರೆ ಹೋಗದೆ ತಮ್ಮ ವ್ಯಾಪ್ತಿಯ ಸೇವಾ ಕೇಂದ್ರಗಳಿಗೆ ನೇರವಾಗಿ ತೆರಳಿ ಯಾವುದೇ ಶುಲ್ಕ ಪಾವತಿಸದೇ ಉಚಿತವಾಗಿ ಗೃಹಲಕ್ಷ್ಮಿ ಯೋಜನೆ ಅಡಿ ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವ್ಯವಸ್ಥಿತ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಜುಲೈ 22ರಂದು 16,784 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದು ಆ ಮೂಲಕ ರಾಜ್ಯದಲ್ಲಿಯೇ ಜಿಲ್ಲೆಯು ಈ ಯೋಜನೆಯಡಿ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಗ್ರಾಮೀಣ ಪ್ರದೇಶದ ಫಲಾನುಭವಿಗಳು ಗ್ರಾಮ ಒನ್ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಹಾಗೂ ನಗರ ಪ್ರದೇಶದ ಫಲಾನುಭವಿಗಳು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಯೋಜನೆಯ ನೋಂದಣಿಗೆ ಯಾವುದೇ ಅಂತಿಮ ದಿನಾಂಕ ಇರುವುದಿಲ್ಲ.
ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೇ ಅರ್ಹ ಫಲಾನುಭವಿಗಳು ಸಂಬಂಧಿಸಿದೆ ಸೇವಾ ಕೇಂದ್ರಗಳಿಗೆ ತೆರಳಿ, ಯಜಮಾನಿ ಪಡಿತರ ಚೀಟಿ ಸಂಖ್ಯೆ,ಆಧಾರ್ ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ ಪುಸ್ತಕ ಹಾಗೂ ಯಜಮಾನಿ ಪತಿಯ ಆಧಾರ ಕಾರ್ಡ್ ದಾಖಲೆಗಳೊಂದಿಗೆ ಗೃಹಲಕ್ಷ್ಮಿ ಯೋಜನೆ ಅಡಿ ನೋಂದಾಯಿಸಿಕೊಳ್ಳಬಹುದು.
ಆಧಾರ್ ನಂಬರ್ ಜೋಡಣೆಯಾಗಿರುವ ಖಾತೆ ಹೊರತುಪಡಿಸಿ, ಬೇರೆ ಖಾತೆಗೆ ಹಣ ವರ್ಗಾವಣೆ ಬಯಸಿದ್ದಲ್ಲಿ ಆ ಬ್ಯಾಂಕಿನ ಖಾತೆ ಸಂಖ್ಯೆ ಒದಗಿಸಿ ನೊಂದಾಯಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಲ್ಯಾಮಿನೇಷನ್-ಪದರು ಹೊದಿತ ಸೌಲಭ್ಯಕ್ಕೆ ಅವಕಾಶ ಇರುವುದಿಲ್ಲ.
ಆದ್ದರಿಂದ, ಸಾರ್ವಜನಿಕರು ಸಹಕರಿಸುವಂತೆಯೂ ಸೇವಾ ಕೇಂದ್ರಗಳಲ್ಲಿ ಜನದಟ್ಟಣೆಯಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.