ವಿಜಯಪುರ

ಗೃಹ ಲಕ್ಷ್ಮಿ ಯೋಜನೆ; ಉಚಿತ ನೋಂದಣಿ ಪ್ರದರ್ಶನ ಫಲಕ ಅಳವಡಿಸಲು ಡಿಸಿ ಸೂಚನೆ

ಸರಕಾರ ನ್ಯೂಸ್ ವಿಜಯಪುರ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲ ಸೇವಾ ಕೇಂದ್ರಗಳಲ್ಲಿ ಉಚಿತ ನೊಂದಣಿ ಫಲಕ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ಆವರಣದ ಕೇಸ್ವಾನ್ ಕೊಠಡಿಯಲ್ಲಿ ಸೋಮವಾರು ಜರುಗಿದ
ಗೃಹಲಕ್ಷ್ಮಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 593954 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಯೋಜನೆಯ ನೋಂದಣಿ ಆರಂಭದಿಂದ ಈವರೆಗೆ ಜಿಲ್ಲೆಯ 121084 ಫಲಾನುಭವಿಗಳು ನೊಂದಾಯಿಸಿಕೊಂಡಿದ್ದು,
ಗೃಹ ಲಕ್ಷ್ಮಿ ಯೋಜನೆಯಡಿ ನೋಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ.

ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಮಾತ್ರ ಅವಕಾಶವಿದ್ದು,ಈ ಕೇಂದ್ರಗಳಲ್ಲಿ ಲ್ಯಾಮಿನೇಶನ್ ವ್ಯವಸ್ಥೆ ಇರುವುದಿಲ್ಲ ಈ ಕುರಿತು ಸಾರ್ವಜನಿಕರಿಗೆ ತಿಳಿ ಹೇಳಬೇಕು ಎಂದು ಸೂಚಿಸಿದರು.

ಫಲಾನುಭವಿಗಳ ನೋಂದಣಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಂದರೆ ಆಯಾ ಸೇವಾ ಕೇಂದ್ರದ ನೋಡಲ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುವುದು. ಯಾವುದೇ ಲೋಪವಾಗದಂತೆ ಜನಸಂದಣಿಯಾಗದಂತೆ ನೋಡಿಕೊಳ್ಳಬೇಕು. ಗೊಂದಲಗಳನ್ನು ತಮ್ಮ ಹಂತದಲ್ಲಿಯೇ ನಿವಾರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಗೃಹಲಕ್ಷ್ಮೀ ಯೋಜನೆ ಯಶಸ್ವಿ ಅನುಷ್ಠಾನಕ್ಕಾಗಿ ಗ್ರಾಮ ಮಟ್ಟದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಪ್ರಥಮ ದರ್ಜೆ ಸಹಾಯಕರು-19, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು-211, ಕಂದಾಯ ನಿರೀಕ್ಷಕರು-16, ಗ್ರಾಮ ಆಡಳಿತ ಅಧಿಕಾರಿಗಳು-252 ಹಾಗೂ ವಲಯ ಮೇಲ್ವಿಚಾರಕರು ಸೇರಿದಂತೆ ಒಟ್ಟು 584 ನೋಡಲ್ ಆಧಿಕಾರಿಗಳನ್ನು ನೇಮಿಸಲಾಗಿದೆ.

ವಿವಿಧ ಇಲಾಖೆಗಳ ತಾಲೂಕಾ ಮಟ್ಟದ 21 ಅಧಿಕಾರಿಗಳು, 7 ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಸೇರಿದಂತೆ ಒಟ್ಟು 28 ತಾಲೂಕಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಜಿಲ್ಲೆಯಲ್ಲಿ 300 ಗ್ರಾಮ ಒನ್ ಕೇಂದ್ರಗಳು, 211 ಬಾಪೂಜಿ ಸೇವಾ ಕೇಂದ್ರಗಳು ಹಾಗೂ 26 ಕರ್ನಾಟಕ ಒನ್ ಕೇಂದ್ರಗಳು ಸೇರಿದಂತೆ 537 ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಉಪವಿಭಾಗಾಧಿಕಾರಿ, ಇಂಡಿ ಉಪವಿಭಾಗಾಧಿಕಾರಿ ಆಬೀದ್ ಗದ್ಯಾಳ ಬಸವಣ್ಣೆಪ್ಪಾ ಕಲಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ನಿಂಗಪ್ಪ ಗೋಠೆ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ತಾಲೂಕಾ ತಹಶೀಲ್ದಾರರು, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!