ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ, ತೊರವಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ, ಈಶ್ವರಪ್ಪ ರಾಜೀನಾಮೆ ಬಗ್ಗೆ ಹೇಳಿದ್ದೇನು ಗೊತ್ತಾ?
ವಿಜಯಪುರ: ಪ್ರತೀ ಚುನಾವಣೆ ಪೂರ್ವ ಮತ್ತು ನಂತರದಲ್ಲೊಮ್ಮೆ ಮನೆ ದೇವರು ತೊರವಿ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಚಿವ ಪ್ರಹ್ಲಾದ ಜೋಶಿ ಅವರ ವಾಡಿಕೆ ಮತ್ತು ಸಂಪ್ರದಾಯ.
ಅಂತೆಯೇ ಈ ಬಾರಿ ವಿಧಾನ ಸಭೆ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇ ಶುಕ್ರವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರಾಜ್ಯ ರಾಜಕಾರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಚಿವ ಕೆ.ಎಸ್. ಈಶ್ವರಪ್ಪಗೆ ರಾಜೀನಾಮೆ ಸಲ್ಲಿಸಲು ಯಾರೂ ಹೇಳಿಲ್ಲ, ಅವರೇ ಸ್ವಂತ ನಿರ್ಣಯದ ಮೇಲೆ ರಾಜೀನಾಮೆ ಸಲ್ಲಿಸಿದ್ದಾರೆ. ಒಲ್ಲದ ಮನಸ್ಸಿನಿಂದ ಪಕ್ಷ ಈಶ್ವರಪ್ಪ ತೀರ್ಮಾನಕ್ಕೆ ಒಪ್ಪಿಕೊಂಡಿದೆ ಎಂದರು.
ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಶುದ್ಧ ಹಸ್ತರಾಗಿ ವಾಪಸ್ ಬರುತ್ತೇನೆ ಎಂದಿದ್ದಾರೆ. ಪ್ರಕರಣದಲ್ಲಿ ಕಾಂಗ್ರೆಸ್ ಕೈವಾಡ ಎದ್ದು ಕಾಣಿಸುತ್ತಿದೆ. ಅವರ ಹಾವಭಾವ ಗಮನಿಸಿದರೆ ಸಂಶಯ ವ್ಯಕ್ತವಾಗುತ್ತದೆ ಎಂದರು.
ಮೇಲ್ನೋಟಕ್ಕೆ ಕಾಂಗ್ರೆಸ್ ಕೈವಾಡ ಎದ್ದು ಕಾಣುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇದರ ಹಿಂದೆ ಯಾರಿದ್ದಾರೆ, ಸಿಡಿ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಯಬೇಕು. ಪುರಾವೆ ಇಲ್ಲದ ಕಾರಣ ನಾನು ಯಾರ ಮೇಲೂ ವೈಯಕ್ತಿಕ ಆರೋಪ ಮಾಡಲು ಹೋಗಲ್ಲ. ರಮೇಶ ಜಾರಕಿಹೊಳಿ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದರು.