ಎಸಿಬಿ ಹೆಸರಿನಲ್ಲಿಯೇ ಭ್ರಷ್ಟಾಚಾರ, ಮೋಸ ಮಾಡಿ ಹಣ ವಸೂಲು, ರಾಜ್ಯಾದ್ಯಂತ 26 ಪ್ರಕರಣ ದಾಖಲು
ವಿಜಯಪುರ: ಭ್ರಷ್ಟಾಚಾರ ನಿಗ್ರಹಿಸಲೆಂದೇ ಸ್ಥಾಪಿಸಲಾದ ಎಸಿಬಿ (ಭ್ರಷ್ಟಾಚಾರ ನಿಗ್ರಹ ದಳ) ಹೆಸರಿನಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿರುವುದು ವಿಪರ್ಯಾಸ.
ಹೌದು, ಎಸಿಬಿ ಅಧಿಕಾರಿಗಳು ಎಂದು ಹೇಳಿಕೊಂಡು ಕೆಲವರು ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಎಸಿಬಿ ಅಧಿಕಾರಿಗಳೇ ಪ್ರಕಟಣೆ ಹೊರಡಿಸಿದ್ದಾರೆ.
ಈಗಾಗಲೇ ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಹೆಸರು ಹೇಳಿ ಸಾರ್ವಜನಿಕ ಅಧಿಕಾರಿ ಸಿಬ್ಬಂದಿಯಿಂದ ಹಣ ವಸೂಲಿ ಮಾಡುತ್ತಿರುವ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ, ಕರ್ನಾಟಕದಾದ್ಯಂತ ಒಟ್ಟು 26 ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣಗಳ ಪೈಕಿ 06 ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ, 20 ಪ್ರಕರಣಗಳು ತನಿಖಾ ಹಂತದಲ್ಲಿರುತ್ತವೆ.
ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಹೆಸರಿನಲ್ಲಿ ಹಣ ಅಥವಾ ಇತ್ಯಾದಿ ಉಡುಗೊರೆಗಳನ್ನು ಅಪೇಕ್ಷಿಸಿ ದೂರವಾಣಿ ಮೂಲಕ ಅಥವಾ ನೇರವಾಗಿ ಕೇಳಿದ್ದಲ್ಲಿ, ಅಪೇಕ್ಷಿಸಿದ್ದಲ್ಲಿ, ಬೇಡಿಕೆ ಇಟ್ಟಲ್ಲಿ ಈ ಕುರಿತಾಗಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲು ಕ್ರಮ ಕೈಗೊಳ್ಳಲು ಸಾರ್ವಜನಿಕ ಸರ್ಕಾರಿ ನೌಕರುಗಳಿಗೆ ಸೂಚಿಸಲಾಗಿದೆ ಎಂದು ಬೆಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಅಪರ ಪೊಲೀಸ್ ಮಹಾನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.