ರಾಜ್ಯ

ಪ್ರಜಾಪ್ರಭುತ್ವ ರಕ್ಷಣೆಗಾಗಿ ರಾಜಭವನ ಚಲೋ

ಸಿಎಂ ಸಿದ್ದರಾಮಯ್ಯ ತೇಜೋವಧೆ
ಶೋಷಿತ ಸಮುದಾಯಗಳ ಒಕ್ಕೂಟದಿಂದ ಖಂಡನೆ

ವಿಜಯಪುರ: ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುತ್ತಿರುವ ಬಿಜೆಪಿ- ಜೆಡಿಎಸ್ ಕುತಂತ್ರಗಳನ್ನು ವಿರೋಧಿಸಿ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ
ಆ.27 ರಂದು ಬೆಳಗ್ಗೆ 11ಕ್ಕೆ ರಾಜ್ಯಭವನ ಚಲೋ ಹಮ್ಮಿಕೊಂಡಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದಾರೆ ಎಂದು ಅಹಿಂದ ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ತಿಳಿಸಿದರು. ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯಕ್ತ ಆಶ್ರಯದಲ್ಲಿ ಈ ಹೋರಾಟ ರೂಪಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. ರಾಜ್ಯಪಾಲ ತಾವರ್ ಚಂದ್ ಗೆಹ್ಲೋತ್ ಪೂರ್ವಾಗ್ರಹ ಪೀಡಿತರಾಗಿ, ಸಂವಿಧಾನದ ಆಶಯಕ್ಕೆ ಧಕ್ಕೆ ತರುವ ರೀತಿ ನಡೆದುಕೊಂಡಿದ್ದಾರೆ. ಬಿಜೆಪಿ- ಜೆಡಿಎಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಮೋದಿ- ಅಮಿತ್ ಷಾ ಷಡ್ಯಂತ್ರಕ್ಕೆ ಬಲಿಯಾಗಿ ಈ ರೀತಿ ನಡೆದುಕೊಂಡಿದ್ದಾರೆ. ರಾಜ್ಯಪಾಲರು ಪಕ್ಷಪಾತಿ ಧೋರಣೆ ತಾಳಿದ್ದಾರೆ ಎಂದು ಆರೋಪಿಸಿದರು. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ತಪ್ಪೆಸಗಿಲ್ಲ. ಹೀಗಾಗಿ ಅವರ ಪರ ನಿಲ್ಲುವುದು ಅನಿವಾರ್ಯವಾಗಿದೆ‌. ಸಂವಿಧಾನ ವಿರೋಧಿ ಕೃತ್ಯದ ವಿರುದ್ಧ ಹೋರಾಟ ಮಾಡುವ ಸಂದರ್ಭ ಬಂದೊದಗಿದೆ‌‌. ಹೀಗಾಗಿ ರಾಜಭವನ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದ್ದು, ಆ.27 ರಂದು ಬೆಳಗ್ಗೆ 11 ಕ್ಕೆ ಬೆಂಗಳೂರಿನ ಸ್ವತಂತ್ರ ಉದ್ಯಾನದಲ್ಲಿ ಹೋರಾಡ ನಡೆಯಲಿದೆ. ರಾಜ್ಯದ ಲಕ್ಷಾಂತರ ಜನ ಪಾಲ್ಗೊಳ್ಳಲಿದ್ದಾರೆ ಎಂದರು. ಮುಖಂಡರಾದ ಡಾ.ರವಿಕುಮಾರ ಬಿರಾದಾರ ಮಾತನಾಡಿ, ಹಿಂದುಳಿದ ನಾಯಕ ಸಿದ್ದರಾಮಯ್ಯ ಗೆ ಕಳಂಕ ತರಲು ಬಿಜೆಪಿ- ಜೆಡಿಎಸ್ ಹುನ್ನಾರ ನಡೆಸಿವೆ. ಇಂಥ ಹುನ್ನಾರ ತಡೆಗೆ ಎಲ್ಲ ವರ್ಗದ ಜನ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಸಂಜೀವ ಕಂಬಾಗಿ ಮಾತನಾಡಿ, ಕಾಂಗ್ರೆಸ್ ಯಶಸ್ವಿಯಾಗಿ ಆಡಳಿತ ನಡೆಸುತ್ತಿದೆ. ಸಿದ್ದರಾಮಯ್ಯ ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ತತ್ವದಡಿ ಆಡಳಿತ ನಡೆಸುತ್ತಿದ್ದಾರೆ. ಅಂಥ ನಾಯಕನಿಗೆ ಕಳಂಕ ತರಲು ಹೊರಟಿರುವ ಬಿಜೆಪಿ- ಜೆಡಿಎಸ್ ವಿರುದ್ಧ ಹೋರಾಟ ಮಾಡಲಾಗುತ್ತಿದ್ದು ಲಕ್ಷಾಂತರ ಜನ ಭಾಗವಹಿಸಲಿದ್ದಾರೆ ಎಂದರು. ಮುಖಂಡರಾದ ಸಂಜೀವ ಕಂಬಾಗಿ, ಫಯಾಕ್ ಕಲಾದಗಿ, ಮಲ್ಲು ಬಿದರಿ ಇದ್ದರು.

error: Content is protected !!