ವಿದ್ಯುತ ಅವಘಡ ! ವಿದ್ಯಾರ್ಥಿನಿಗೆ ಗಂಭೀರ ಗಾಯ
ವಿಜಯಪುರ: ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿನಿಯೊಬ್ಬಳು ತೀವ್ರ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ತಾಲ್ಲೂಕಿನ ಮಖಣಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಖಣಾಪುರ ಎಲ್.ಟಿ 02 ತಾಂಡಾದ ಅಕ್ಷತಾ ನೀಲು ರಾಠೋಡ (13) ತೀವ್ರ ಗಾಯಗೊಂಡ ವಿದ್ಯಾರ್ಥಿನಿ. ಮಂಗಳವಾರ ಬೆಳಿಗ್ಗೆ 9.30ರ ಸೂಮಾರು ಶಾಲೆಗೆ ತೆರಳಲು ಹೊರಟಿದ್ದ ಸಂದರ್ಭದಲ್ಲಿ ಮನೆಯ ಹಿಂಬದಿಯಲ್ಲಿ ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ, ಪ್ರವಹಿಸುತ್ತಿದ್ದ ವಿದ್ಯುತ್ ತಂತಿ ತಗುಲಿದ ಹಿನ್ನೆಲೆ ಈ ಅವಘಡ ಸಂಭವಿಸಿದೆ. ವಿದ್ಯುತ್ ಸ್ಪರ್ಶವಾದ ತಕ್ಷಣ ಕುಟುಂಬದವರು ಸಂರಕ್ಷಿಸಿದ್ದು, ಶೀಘ್ರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ವಿಜಯಪುರ ನಗರದ ಖಾಸಗಿ ಆಸ್ಪತ್ರೆಯೊಂದರ ತೀವ್ರನಿಗಾ ಘಟಕದಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಸ್ಕಾಂ ವಿರುದ್ಧ ಆಕ್ರೋಶ: ಮನೆ ಹಿಂಬದಿ ಹಾದು ಹೋಗಿರುವ ವಿದ್ಯುತ್ ಕಂಬ ಹಾಗೂ ತಂತಿ ಹಳೆಯದ್ದಾಗಿದ್ದು ಅವಗಳನ್ನು ತೆರವುಗೊಳಿಸಿ ಹೊಸ ವಿದ್ಯುತ್ ತಂತಿ ಅಳವಡಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅವಘಡ ಸಂಭವಿಸುದನ್ನು ಎರಡು ದಿನದ ಹಿಂದೆ, ಇದೇ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು, ಹೆಸ್ಕಾಂನವರು ಬೇಜವಾಬ್ದಾರಿಯಿಂದ ಅವಳವಡಿಸಿ ರಿಪೇರಿ ಮಾಡಿ ಹೋಗಿದ್ದಾರೆ, ಹೆಸ್ಕಾಂನ ಬೇಜವಾಬ್ದಾರಿಯಿಂದಾಗಿ ಮತ್ತೆ ವಿದ್ಯುತ್ ತಂತಿ ಬಿದ್ದಿದ್ದು, ಈ ಅವಘಡಕ್ಕೆ ಕಾರಣವಾಗಿದೆ ಎಂದು ವಿದ್ಯಾರ್ಥಿನಿಯ ತಂದೆ ನೀಲು ರಾಠೋಡ ಆರೋಪಿಸಿದರು. ಆರೋಪ: ತಾಂಡಾದಲ್ಲಿನ ಬಹುತೇಕ ಎಲ್ಲ ವಿದ್ಯುತ್ ಕಂಬಗಳು ಬೀಳುವ ಸ್ಥಿತಿಯಲ್ಲಿದ್ದು, ಅವುಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸುವಂತೆ ಕಳೆದ ಒಂದು ವರ್ಷಗಳಿಂದ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ, ಅಧಿಕಾರಿಗಳು ನಿರ್ಲಕ್ಷ ದೋರಣೆ ಅನುಸರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಕಳೆದ ಬಾರಿ ಹೆಸ್ಕಾಂ ಇಲಾಖೆ ಕಾಟಾಚಾರಕ್ಕೆ ತಾಂಡಾ 8–10 ಕಂಬಗಳನ್ನು ಬದಲಿಸಿ ಸುಮ್ಮನಾಗಿದೆ. ಗ್ರಾಮದಲ್ಲಿ ಮತ್ತೆ ಇಂತಹ ಅವಘಡಗಳು ಸಂಭವಿಸದಂತೆ ಎಚ್ಚೆತ್ತುಕೊಂಡು ಅಧಿಕಾರಿಗಳು ಹಳೆಯ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬ ಹಾಗೂ ವಿದ್ಯುತ್ ತಂತಿಗಳನ್ನು ಅಳವಡಿಸಬೇಕು ಎಂದು ಮಖಣಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಚಹ್ವಾಣ ಆಗ್ರಹಿಸಿದರು.