ನಮ್ಮ ವಿಜಯಪುರ

ಡೋಣಿ ನದಿ ಪ್ರವಾಹ ಹಾನಿ, 15ದಿನಗಳೊಳಗೆ ಸರ್ವೆ ವರದಿ ಸಲ್ಲಿಸಲು ಡಿಸಿ ಸೂಚನೆ

ಸರಕಾರ್‌ ನ್ಯೂಸ್‌ ವಿಜಯಪುರ

ಅವೈಜ್ಞಾನಿಕವಾಗಿ ಡೋಣಿ ನದಿಗೆ ಬ್ರಿಡ್ಜ್ ನಿರ್ಮಿಸಿರುವುದರಿಂದ ಪ್ರತಿವರ್ಷ ಪ್ರವಾಹದಿಂದ ಡೋಣಿ ನದಿ ದಡದಲ್ಲಿರುವ ಗ್ರಾಮಗಳಿಗೆ ನೀರು ಹರಿದು ಬೆಳೆ ನಾಶವಾಗಿರುವುದರಿಂದ ಪರಿಹಾರ ದೊರಕಿಸುವ ನಿಟ್ಟಿನಲ್ಲಿ 15 ದಿನಗಳೊಳಗೆ ಸರ್ವೇ ಕಾರ್ಯ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಡೋಣಿ ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ಪ್ರವಾಹದಿಂದ ಹಾನಿಯಾದ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರವಾಹದಿಂದ ಡೋಣಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ ಬಬಲೇಶ್ವರ ತಾಲೂಕಿನ ಸಾರವಾಡ, ಧನ್ಯಾಳ, ದಾಶ್ಯಾಳ ಹಾಗೂ ತಿಕೋಟಾ ತಾಲೂಕಿನ ಕೋಟ್ಯಾಳ, ಹರನಾಳ, ವಿಜಯಪುರ ತಾಲೂಕಿನ ಉಕುಮನಾಳ, ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ, ಯಾಳವಾರ, ತಾಳಿಕೋಟೆ, ದೇವರಹಿಪ್ಪರಗಿಯಲ್ಲಿ ಕೃಷಿ ಬೆಳೆ ಮತ್ತು ಬಬಲೇಶ್ವರ ಮತ್ತು ತಿಕೋಟಾ ಭಾಗದಲ್ಲಿ ತೋಟಗಾರಿಕೆ ಬೆಳೆ ಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟವಾಗಿರುವ ಕುರಿತು ಸಂಬಂಧಪಟ್ಟ ತಹಶೀಲ್ದಾರ, ತಾಲೂಕಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಕೃಷಿ ಅಧಿಕಾರಿಗಳು ಸಮನ್ವಯತೆ ಸಾಧಿಸಿಕೊಂಡು ಹಾನಿಯಾದ ಪ್ರದೇಶದ ಸರ್ವೇ ಕಾರ್ಯ ಕೈಗೊಂಡು ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು.

ಪ್ರವಾಹದಿಂದಾದ ಹಾನಿಯ ಕುರಿತ ವರದಿಯನ್ನಾಧರಿಸಿ, ಕೇಂದ್ರಕ್ಕೆ ಪತ್ರ ಬರೆದು, ಸ್ಥಳೀಯವಾಗಿ ಲಭ್ಯವಿರುವ ಸಾಧನ ಸಲಕರಣೆಗಳೊಂದಿಗೆ ಕಾರ್ಯಕ್ರಮ ರೂಪರೇಷೆಗಳನ್ನು ತಯಾರಿಸಿ, ಕಾರ್ಯರೂಪಕ್ಕೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ಈಗಾಗಲೇ ಭಾರತೀಯ ಜೈನ್ ಸಂಘಟನೆ ಪ್ರವಾಹ, ಭೂಕಂಪ, ನೆರೆಹಾವಳಿ, ಜಲವೃದ್ದಿಕರಣ ಜೊತೆಗೆ ಹಲವಾರು ವಿಕೋಪದ ಸಂದರ್ಭಗಳಲ್ಲಿ ಚಟುವಟಿಕೆಗಳನ್ನು ಮಾಡುತ್ತ ಬಂದಿದ್ದು, ಡೋಣಿ ನದಿಗಳ ಹೂಳೆತ್ತುವ ಕಾಮಗಾರಿ, ಡೋಣಿ ನದಿಗೆ ಕಾಯಕಲ್ಪ ನೀಡುವಲ್ಲಿ ಈ ಸಂಘಟನೆ ಮಹತ್ವವಾದ ಕಾರ್ಯಕ್ಕೆ ಸಹಾಯಹಸ್ತ ನೀಡುವುದರೊಂದಿಗೆ ಈ ಕಾರ್ಯಕ್ಕೆ ಕೈ ಜೋಡಿಸಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ರಾಮಚಂದ್ರ ಗಡದೆ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎ.ಬಿ.ಚಿಕ್ಕಲಕಿ, ವಿಜಯಪುರ ತಹಶೀಲ್ದಾರ ಸಿದರಾಯ ಭೋಸಗಿ, ಭಾರತೀಯ ಜೈನ್ ಸಂಘಟನೆಯ ಮಹಾವೀರ ಪಾರೇಖ, ವಿಜಯ ರುಣವಾಲ, ಅಮೀತ ಕಟಾರಿಯಾ, ಅರುಣ ರುಣವಾಲ, ನರೇಂದ್ರ ಸುರಾಣಾ, ರಾಜೇಶ ಜೈನ್, ಸಂಗು ಪಾಟೀಲ, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!