ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ಪರಿಶೀಲನೆ, ಅತಿಕ್ರಮಣ ತೆರವು ಕಾರ್ಯಾಚರಣೆ, ಡಿಸಿ ದಾನಮ್ಮನವರ ಹೇಳಿದ್ದೇನು ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ನಗರದ ಇಬ್ರಾಹಿಂಪುರ ರೇಲ್ವೆ ಗೇಟ್ ಓವರ್ ಬ್ರಿಜ್, ನಗರದ ವಾಟರ್ ಟ್ಯಾಂಕ್‍ದಿಂದ ಸೋಲಾಪುರ ರಸ್ತೆಯ ಬಿ.ಎಂ.ಪಾಟೀಲ ವೃತ್ತದವರೆಗಿನ ರಸ್ತೆ ಅಗಲೀಕರಣ, ರಾಮನಗರ ರಸ್ತೆ, ದರ್ಗಾ ಕ್ರಾಸ್ ದಿಂದ ಬಂಜಾರಾ ಕ್ರಾಸ್‍ದವರೆಗಿನ ಅತಿಕ್ರಮಣ ತೆರವುಗೊಳಿಸುವ ಕಾರ್ಯಾಚರಣೆ ಸ್ಥಳಕ್ಕೆ ಸೋಮವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಇಬ್ರಾಹಿಂಪೂರ ರೇಲ್ವೆ ಗೇಟ್ ಓವರ್ ಬ್ರಿಜ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಬಾಕಿ ಇರುವ ಕಾಮಗಾರಿಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸಿ ಶೀಘ್ರವೇ ಈ ರೇಲ್ವೆ ಓವರ್ ಬ್ರಿಜ್ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ನಗರದ ರಾಮನಗರ ರಸ್ತೆ ಹಾಗೂ ನಗರದ ವಾಟರ್ ಟ್ಯಾಂಕ್‍ದಿಂದ ಸೋಲಾಪುರ ರಸ್ತೆಯ ಬಿ.ಎಂ.ಪಾಟೀಲ ವೃತ್ತದವರೆಗಿನ ರಸ್ತೆ ಅಗಲೀಕರಣಕ್ಕಾಗಿ ಮಹಾನಗರ ಪಾಲಿಕೆ ವತಿಯಿಂದ ಕೈಗೊಂಡಿರುವ ಅತಿಕ್ರಮಣ ತೆರವು ಕಾರ್ಯಾಚರಣೆ ಪರಿಶೀಲಿಸಿದ ಅವರು, ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಧೂಳಿನಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಕೈಗೊಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಶಂಕರಗೌಡ ಸೋಮನಾಳ, ಡಿವೈಎಸ್‍ಪಿ ಸಿದ್ದೇಶ್ವರ, ರೇಲ್ವೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೋಮನಾಥ ಸೇರಿದಂತೆ ಲೋಕೋಪಯೋಗಿ ಇಲಾಖೆ ಕಾರ್ಯನಿವಾಹಕ ಅಭಿಯಂತರ ಎ.ಬಿ.ಚಿಕ್ಕಲಕಿ, ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)