ನಮ್ಮ ವಿಜಯಪುರ

ಹಳ್ಳದ ಸೇತುವೆಯ ಗೇಟ್‌ಗಳ ಕಳ್ಳತನ, ದೂರು ದಾಖಲಿಸಿದ ಸಹಾಯಕ ಇಂಜಿನೀಯರ್‌

ಸರಕಾರ್‌ ನ್ಯೂಸ್‌ ಇಂಡಿ

ಗೊಳಸಾರ ಮತ್ತು ಲಾಳಸಂಗಿ ಗ್ರಾಮಗಳ ಮಧ್ಯೆ ದೊಡ್ಡ ಹಳ್ಳಕ್ಕೆ ಕಟ್ಟಿದ ಬ್ರಿಡ್ಜ್‌ ಗೇಟುಗಳನ್ನು ಕಳ್ಳತನ ಮಾಡಿಕೊಂಡ ಹೋದ ಪ್ರಕರಣ ಬೆಳಕಿಗೆ ಬಂದಿದೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಉಪ ವಿಭಾಗದಿಂದ 2017ರಲ್ಲಿ ನಿರ್ಮಾಣಗೊಂಡ 126 ಗೇಟ್‌ಗಳ ಬ್ರಿಡ್ಜ್‌ನ ಕೆಲವು ಗೇಟ್‌ಗಳನ್ನು ಕಳ್ಳತನ ಮಾಡಲಾಗಿದೆ.

ಕಳೆದ ಅಕ್ಟೋಬರ್‌ನಲ್ಲಿಯೇ ಈ ಘಟನೆ ನಡೆದಿದ್ದು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಇದೀಗ ಸಹಾಯಕ ಇಂಜಿನೀಯರ್‌ ಕಲ್ಲನಗೌಡ ಶಂಕ್ರೆಪ್ಪ ಬಿರಾದಾರ ಪೊಲೀಸ್‌ ಪ್ರಕರಣ ದಾಖಲಿಸಿದ್ದಾರೆ.

ಪ್ರಕರಣದ ವಿವರ:

ಅ.25ರಂದು ಬೆಳಗ್ಗೆ 10.30ರ ಸುಮಾರಿಗೆ ಕಲ್ಲನಗೌಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗೊಳಸಾರ ಗ್ರಾಮದ ಮಲ್ಲನಗೌಡ ಆರ್‌. ಪಾಟೀಲ ಫೋನ್‌ ಮಾಡಿ ಗೊಳಸಾರ ಮತ್ತು ಲಾಳಸಂಗಿ ಗ್ರಾಮಗಳ ಮಧ್ಯೆ ದೊಡ್ಡ ಹಳ್ಳಕ್ಕೆ ಕಟ್ಟಿದ ಬಿಡ್ಜ್‌ನ ಗೇಟ್‌ಗಳಲ್ಲಿ ಕೆಲವು ಇಲ್ಲದಿರುವ ಬಗ್ಗೆ ಸಹಾಯಕ ಇಂಜಿನೀಯರ್‌ ಕಲ್ಲನಗೌಡ ಗಮನಕ್ಕೆ ತಂದಿದ್ದಾರೆ. ಕೂಡಲೇ ಕಲ್ಲನಗೌಡ ಮೇಲಾಧಿಕಾರಿ ಚಂದ್ರಕಾಂತ ಶರಣಪ್ಪ ಕರೂರ ಇವರಿಗೆ ತಿಳಿಸಿ ಸ್ಥಳಕ್ಕೆ ಹೋಗಿ ನೋಡಲಾಗಿ ಒಟ್ಟು 126 ಗೇಟ್‌ಗಳಲ್ಲಿ 38 ಗೇಟ್‌ಗಳು ಇರಲಿಲ್ಲ. ಈ ಬಗ್ಗೆ ಗೊಳಸಾರ ಗ್ರಾಮದ ಮಲ್ಲನಗೌಡರನ್ನು ವಿಚಾರಿಸಲಾಗಿ, ರಾತ್ರಿ ಗೇಟ್‌ ಇದ್ದವು. ಬೆಳಗಿನ ಜಾವ ಇರಲಿಲ್ಲ ಎಂದರು. ಒಟ್ಟು 38 ಗೇಟ್‌ಗಳು ಕಳುವಾಗಿದ್ದು, ಅದರ ಮೌಲ್ಯ 4.80 ಲಕ್ಷ ರೂ.ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ನ.24ರಂದು  ಪ್ರಕರಣ ದಾಖಲಿಸಿಕೊಂಡಿರುವ ಇಂಡಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!