ಪಂಚಮಸಾಲಿ ಸಮಾಜದಿಂದ ಮಾಡು ಇಲ್ಲವೇ ಮಡಿ ಹೋರಾಟ, ಮೀಸಲಾತಿ ಕೊಟ್ಟರೆ ಸನ್ಮಾನ-ಇಲ್ಲದಿದ್ದರೆ ಹೋರಾಟ, ಇಲ್ಲಿದೆ ಸುದ್ದಿಗೋಷ್ಠಿ ವಿವರ
ಸರಕಾರ್ ನ್ಯೂಸ್ ವಿಜಯಪುರ
ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಅಂತಿಮ ಘಟ್ಟ ತಲುಪಿದ್ದು ಇದೀಗ ಮಾಡು ಇಲ್ಲವೇ ಮಡಿ ಎಂಬ ನಿಟ್ಟಿನಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ ತಿಳಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಳಿಗಾಲ ಅಧಿವೇಶನ ಹಿನ್ನೆಲೆ ಡಿ.22 ರಂದು ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶ ನಡೆಯಲಿದೆ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಟ್ಟರೆ ಸಮಾವೇಶದಲ್ಲಿಯೇ ಅಭಿನಂದಿಸಲಾಗುವುದು ಇಲ್ಲವಾದಲ್ಲಿ ಪ್ರತಿಭಟನೆ ಮುಂದುವರಿಸಲಾಗುವುದು ಎಂದರು.
ಇದು ಕರ್ನಾಟಕ ರಾಜ್ಯದಲ್ಲಿ ಅಖಿಲ ಭಾರತ ಪಂಚಮಸಾಲಿ ಸಮಾಜದ ಮೀಸಲಾತಿಯ ಕಟ್ಟಕಡೆಯ ಹೋರಾಟವಾಗಿದೆ. ಮೀಸಲಾತಿ ನೀಡಿದರೆ ಅಭಿನಂದಿಸಲಾಗುವುದು. ಇಲ್ಲವಾದಲ್ಲಿ ಹೋರಾಟ ಮುಂದುರಿಸಲಾಗುವುದು ಎಂದರು.
ಜಿಲ್ಲಾ ಪಂಚಮಸಾಲಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್. ರುದ್ರಗೌಡರ ಮಾತನಾಡಿ, ಡಿ.19ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ ಗಡುವು ಮುಗಿಯಲಿದೆ. ಈಗಾಗಲೇ ವರದಿ ತರಿಸಿಕೊಂಡಿದ್ದು ಬೇಡಿಕೆ ಈಡೇರುವ ಭರವಸೆ ಇದೆ. ಹಾಗೊಂದು ವೇಳೆ ಬೇಡಿಕೆ ಈಡೇರದೇ ಹೋದರೆ ಅಧಿವೇಶನ ವೇಳೆ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.
ಪ್ರತಿ ವಿಧಾನ ಸಭೆ ಕ್ಷೇತ್ರಕ್ಕೆ ಕನಿಷ್ಠ 20 ವಾಹನ ವ್ಯವಸ್ಥೆ ಇದ್ದು ಪ್ರತಿ ಮನೆಯ ಸದಸ್ಯರೂ ಭಾಗವಹಿಸಲಿದ್ದು ಒಟ್ಟು 25 ಲಕ್ಷ ಜನ ಸೇರಿಸುವ ತಯಾರಿ ನಡೆದಿದೆ. ಕಲಬುರಗಿ, ಬಾಗಲಕೋಟೆ, ಕಪ್ಪಳ, ಮೈಸೂರು ಸೇರಿದಂತೆ ನಾಡಿನ ನಾನಾಭಾಗಗಳಿಂದ ಜನ ಆಗಮಿಸಲಿದ್ದಾರೆ. ಈಗಾಗಲೇ ಹತ್ತು ಲಕ್ಷ ಜನರನ್ನು ಸೇರಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ. ಇದೀಗ ಕಡೆಯ ಹೋರಾಟವಾಗಿದ್ದು ಮೀಸಲಾತಿ ಪಡೆದೇ ತೀರುವುದಾಗಿ ತಿಳಿಸಿದರು.
ಲಿಂಗಾಯತರಲ್ಲೇ ಪಂಚಮಸಾಲಿ ಸಮಾಜ ದೊಡ್ಡದು. ಈಗಾಗಲೇ ಕೆಲವು ಸಮಾಜಗಳು ಮೀಸಲಾತಿ ಪಡೆದಿವೆ. ಹೀಗಾಗಿ ಪಂಚಮಸಾಲಿ ಸಮಾಜಕ್ಕೂ ಅನ್ವಯಿಸಬೇಕೆಂದರು.
ಬಸನಗೌಡ ಪಾಟೀಲ ಯತ್ನಾಳ ಹಾಗೂ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳ ಹೋರಾಟದ ಫಲವಾಗಿ ಬೇಡಿಕೆ ಈಡೇರುತ್ತಿದೆ. ಅವರ ಸಮ್ಮುಖದಲ್ಲಿಯೇ ಹೋರಾಟ ನಡೆಯುತ್ತಿದೆ. ಯಾರು ಬೇಕಾದರೂ ಸಮಾವೇಶದಲ್ಲಿ ಪಾಲ್ಗೊಳ್ಳಬಹುದು ಎಂದರು.
ಪಂಚಸೇನೆ ರಾಜ್ಯಾಧ್ಯಕ್ಷ, ಡಾ.ಬಿ.ಎಸ್. ಪಾಟೀಲ ನಾಗರಾಳ ಹುಲಿ ಮಾತನಾಡಿ, ಇದು ಕೊನೆಯ ಹೋರಾಟ. ಮಾಡು ಇಲ್ಲವೇ ಮಡಿ ಎಂಬ ಹೋರಾಟ. ಹೀಗಾಗಿ ಸಮಾಜ ಬಂಧುಗಳು ಹಾಸಿಗೆ, ಹೊದಿಕೆಯೊಂದಿಗೆ ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳಬೇಕು. ಕಡಿಬಡವರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಪಂಚಮಸಾಲಿ ಹೋರಾಟದ ಅಂತಿಮ ಹೋರಾಟ ಸವದತ್ತಿಯಲ್ಲಿ ಡಿ. 19 ರಂದು ನಡೆಯಲಿದ್ದು ಅಲ್ಲಿಂದ ಬೆಳಗಾವಿ ವರೆಗೆ ಪಾದಯಾತ್ರೆ ನಡೆಯಲಿದೆ. ಡಿ.22ರಂದು ಬೃಹತ್ ಸಮಾವೇಶ ನಡೆಯಲಿ ಎಂದರು. ನಿಂಗನಗೌಡ ಸೋಲಾಪುರ ಮತ್ತಿತರರಿದ್ದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)