ಇದು ವಿಜಯಪುರದ ಹೆಮ್ಮೆ, ಸುವರ್ಣ ಸೌಧದಲ್ಲಿನ ಬಸವ ಚಿತ್ರ ಬಿಡಿಸಿದ್ದು ಯಾರು ಗೊತ್ತಾ?
ಸರಕಾರ್ ನ್ಯೂಸ್ ವಿಜಯಪುರ
ಬೆಳಗಾವಿ ಸುವರ್ಣ ವಿಧಾನಸೌಧದ ವಿಧಾನಸಭೆಯ ಸಭಾಂಗಣದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಗಜ್ಯೋತಿ ಬಸವಣ್ಣ ಅವರದೂ ಸೇರಿದಂತೆ ಏಳು ಮಹನೀಯರ ಭಾವಚಿತ್ರದ ಕಲಾಕೃತಿಗಳನ್ನು ಅನಾವರಣಗೊಳಿಸಿದ್ದು ಸರ್ವವಿಧಿತ.
ಆದರೆ ಆ ಕಲಾಕೃತಿಗಳನ್ನು ರಚಿಸಿದ ಕಲಾವಿದರ ಕುರಿತು ಬಹುತೇಕರಿಗೆ ತಿಳಿದಿಲ್ಲ.
ಏಳು ಕಲಾಕೃತಿಗಳ ಪೈಕಿ ವಿಶ್ವಗುರು ಬಸವಣ್ಣನವರು ನಿಂತ ಭಂಗಿಯ ಭಾವಚಿತ್ರವನ್ನು ರಚಿಸಿದವರು ವಿಜಯಪುರದ ಪಿ.ಎಸ್.ಕಡೆಮನಿ ಎಂಬ ಹಿರಿಯ ಕಲಾವಿದರಾಗಿರುವುದು ಹೆಮ್ಮೆಯ ಸಂಗತಿ.
ಮಾಡಿದೆನೆಂಬುದು ಮನದಲ್ಲಿ ಹೊಳೆದಡೆ
ಏಡಿಸಿ ಕಾಡಿತ್ತು ಶಿವನ ಡಂಗುರ
ಮಾಡಿದೆನೆನ್ನದಿರಾ ಲಿಂಗಕ್ಕೆ
ಮಾಡಿದೆನೆನ್ನದಿರಾ ಜಂಗಮಕ್ಕೆ
ಮಾಡಿದೆನೆಂಬುದು ಮನದಲಿಲ್ಲದಿದ್ದಡೆ
ಬೇಡಿತ್ತನೀವನು ಕೂಡಲಸಂಗಮದೇವ.
ಎಂಬ ಬಸವಣ್ಣನವರ ವಚನವನ್ನು ಚಿತ್ರಕಲಾ ರಂಗದಲ್ಲಿ ಚಾಚು ತಪ್ಪದೇ ಬಲು ನಿಷ್ಠೆಯಿಂದ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಿತ್ಯ ಪರಿಪಾಲಿಸುತ್ತಾ ಕಲಾ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಈ ಕಲಾ ಕಾಯಕಯೋಗಿ ಪುನ್ನಪ್ಪ ಎಸ್. ಕಡೇಮನಿ ಅವರು.
1955 ರಲ್ಲಿ ವಿಜಯಪುರ ಜಿಲ್ಲೆಯ ಕುಮಠೆ ಎಂಬ ಚಿಕ್ಕ ಗ್ರಾಮದಲ್ಲಿ ರೈತಾಪಿ ಕುಟುಂಬದಲ್ಲಿ ಜನಿಸಿದ ಇವರು ರಾಜ್ಯದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರೆಂದು ಪರಿಗಣಿಸಬಹುದಾದ ಅಪ್ಪಟ ಪ್ರತಿಭಾವಂತ ಹಾಗೂ ಭಾವಚಿತ್ರ ರಚನೆಯಲ್ಲಿ ವಿಶಿಷ್ಠ್ಠವಾದ ಖ್ಯಾತಿ ಹೊಂದಿದ ಕಲಾವಿದರು ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಹೌದು.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದ ಬಸವಣ್ಣ ಭಾರತದ 12ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ, ಸಾಮಾಜಿಕ ಸುಧಾರಕರು, ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದವರು, ಸಾಮಾಜಿಕ ಲಿಂಗ ತಾರಮ್ಯ ಮೂಢನಂಬಿಕೆಗಳನ್ನು ನಿರಾಕರಿಸಿದವರು, ಮಹಾಮಾನತವಾದಿ, ಜಗತ್ತಿನ ಪ್ರಪ್ರಥಮ ಸಂಸದೀಯ ಜನಕರಾದ ವಿಶ್ವಗುರು ಬಸವೇಶ್ವರರ ಭಾವಚಿತ್ರ ರಚನೆ ಮಾಡುವ ಸೌಭಾಗ್ಯ ಇವರ ಪಾಲಿಗೆ ಬಂದದ್ದು ನಿಜಕ್ಕೂ ಒಂದು ಯೋಗಾಯೋಗವೇ ಸರಿ.
ಬೆಳಗಾವಿಯ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಇವರು ಭಕ್ತಿ ಭಾವದಿಂದ ರಚಿಸಿದ 5*8 ಅಡಿ ಅಳತೆಯ ಪೂರ್ಣ ಪ್ರಮಾಣದ ಶ್ರೀ ಬಸವೇಶ್ವರರ ಭಾವಚಿತ್ರ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ಸಾರಥ್ಯದಲ್ಲಿ ಅನಾವರಣಗೊಂಡಿದ್ದು ಕನ್ನಡಿಗರಿಗೆ ಹಾಗೂ ವಿಜಯಪುರದವರಿಗೆ ಅತ್ಯಂತ ಸಂತಸದ ವಿಷಯ.
ಈ ಬಸವೇಶ್ವರವರ ಭಾವಚಿತ್ರ ರಚಿಸಿದ ಕಲಾವಿದರು ನಮ್ಮ ವಿಜಯಪುರದ ಖ್ಯಾತ ಕಲಾವಿದರಾದ ಪಿ.ಎಸ್. ಕಡೇಮನಿ ಎಂಬುದು ಅಭಿಮಾನದ ಸಂಗತಿ ಅಲ್ಲವೇ…?
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)