ನಮ್ಮ ವಿಜಯಪುರ

ಗಾಣಿಗ ಸಮಾಜದಿಂದ ಸುವರ್ಣ ಸೌಧದ ಎದುರು ಪ್ರತಿಭಟನೆ, ಕಾರಣ ಏನು ಗೊತ್ತಾ?

ಸರಕಾರ್‌ ನ್ಯೂಸ್‌ ವಿಜಯಪುರ

ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗಾಣಿಗ ಸಮಾಜದ ವನಶ್ರೀ ಸಂಸ್ಥಾನ ಮಠದ ಜಗದ್ಗುರು ಜಯಬಸವಕುಮಾರ ಸ್ವಾಮೀಜಿ ಹಾಗೂ ರಾಜ್ಯಾಧ್ಯಕ್ಷ ಗುರಣ್ಣ ಗೋಡಿ ನೇತೃತ್ವದಲ್ಲಿ ಡಿ.29 ರಂದು ಬೆಳಗಾವಿ ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಗಾಣಿಗ ಸಮಾಜ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಹೇಳಿದರು.

ನಗರದ ವನಶ್ರೀ ಸಂಸ್ಥಾನ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸಮಾಜಕ್ಕೆ ತೊಂದರೆಯಾಗುತ್ತಿದೆ. 2ಎ ಮೀಸಲಾತಿಯಲ್ಲಿ ಗಾಣಿಗ ಸೇರಿ 102 ಜಾತಿಗಳಿವೆ. ಆದರೆ ಕೆಲವು ಯೋಜನೆಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ. ಸರ್ಕಾರದಿಂದ ಉಚಿತ ಐಎಎಸ್ ಹಾಗೂ ಕೆಎಎಸ್ ತರಬೇತಿ ನೀಡಲಾಗುತ್ತದೆ. ನಾವು 2ಎ ಮೀಸಲಾತಿ ಅಡಿಯಲ್ಲಿ ಇದ್ದರೂ ಸಹಿತ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತಿಲ್ಲ. ಸಮಾಜದ ಅನೇಕ ಶಿಕ್ಷಣ ಸಂಸ್ಥೆಗಳಿವೆ, ಮಠಗಳಿವೆ ಅವುಗಳನ್ನು ಅಭಿವೃದ್ಧಿ ಮಾಡಲು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗದೆ ಸಮಾಜ ಹಿಂದುಳಿಯುತ್ತಿದೆ ಹಾಗಾಗಿ ಗಾಣಿಗ ಸಮಾಜಕ್ಕೆ ಪ್ರತ್ಯೇಕ ನಿಗಮ ಮಂಡಳಿ ಕೊಡಬೇಕು ಎಂದು ಮನವಿ ಮಾಡಿದರು.
ಸರ್ಕಾರ ಕಳೆದ 7 ವರ್ಷಗಳಲ್ಲಿ ಗಾಣಿಗ ಸಮಾಜಕ್ಕೆ ಕೇವಲ 26 ಕೋಟಿ ರೂ. ಅನುದಾನ ನೀಡಿದೆ. ಇಷ್ಟು ಕಡಿಮೆ ಹಣದಲ್ಲಿ ಸಮಾಜದ ಅಭಿವೃದ್ಧಿ ಹೇಗೆ ಸಾಧ್ಯ. ಗಾಣದ ಮೂಲಕ ಎಣ್ಣೆ ತೆಗೆಯುವುದು ನಮ್ಮ ಸಮಾಜ ವೃತ್ತಿಯಾಗಿದೆ. ಆದರೆ ಯಂತ್ರೋಪಕರಣಗಳಿಂದಾಗಿ ನಮ್ಮ ವೃತ್ತಿ ನಿಂತು ಹೋಗಿದೆ. ಸಮಾಜದ ಅನೇಕ ಬಡಜನರು ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಲು ಹಣವಿಲ್ಲದೆ ಶಾಲೆಯನ್ನು ಅರ್ಧಕ್ಕೆ ನಿಲ್ಲಿಸಿ ಕೂಲಿ ಕೆಲಸಗಳಿಗೆ ಕಳುಹಿಸುತ್ತಿದ್ದಾರೆ. ಅಂತಹ ಬಡ ಕುಟುಂಬಗಳನ್ನು ರಕ್ಷಣೆ ಮಾಡಬೇಕಾದರೆ ಉಚಿತ ವಸತಿ ನಿಲಯಗಳು, ಶಾಲೆಗಳು, ಸಮುದಾಯ ಭವನಗಳು ನಿರ್ಮಾಣ ಮಾಡಬೇಕು. ಹಾಗಾಗಿ ನಮ್ಮ ಸಮಾಜಕ್ಕೆ ನಿಗಮ ಮಂಡಳಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ನೂತನವಾಗಿ ಕೆಲವು ಸಮಾಜಗಳಿಗೆ ನಿಗಮ ಮಂಡಳಿಗಳನ್ನು ಘೊಷಣೆ ಮಾಡುತ್ತದೆ ಎಂದು ತಿಳಿದು ಬಂದಿದೆ. ಆ ನಿಟ್ಟಿನಲ್ಲಿ ಗಾಣಿಗ ಸಮಾಜದ ಬೇಡಿಕೆ ಬಹಳ ಹಿಂದಿನದ್ದು ನಿಗಮ ಮಂಡಳಿ ಘೋಷಣೆ ಮಾಡುವಾಗ ನಮ್ಮ ಸಮಾಜಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು.  ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡಲು ನಮ್ಮದೇನು ತಕರಾರು ಇಲ್ಲ. ಹಿಂದುಳಿದ ಸಮಾಜಕ್ಕೆ ಮೀಸಲಾತಿ ನೀಡುವುದು ಸರ್ಕಾರದ ಸಂವಿಧಾನ ಬದ್ಧ ಕರ್ತವ್ಯ. ಆದರೆ 2ಎ ಯಲ್ಲಿ ಈಗಾಗಲೇ 102 ಸಮಾಜಗಳಿವೆ ಹಾಗಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚು ಮಾಡಿ ಪಂಚಮಸಾಲಿಗಳಿಗೆ ನೀಡಿ ಎಂದರು.
ಫೆಬ್ರವರಿ ತಿಂಗಳಲ್ಲಿ ನಮ್ಮ ಸಮಾಜದ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆ ಸಮಾವೇಶದಲ್ಲಿ ರಾಜ್ಯದ 40 ಲಕ್ಷ ಗಾಣಿಗ ಸಮಾಜ ಬಂಧುಗಳು ಭಾಗವಹಿಸಲಿದ್ದಾರೆ. ಆ ಕಾರ್ಯಕ್ರಮಕ್ಕಿಂತಲೂ ಮುಂಚಿತವಾಗಿ ಮುಖ್ಯಮಂತ್ರಿಗಳು ನಿಗಮ ಮಂಡಳಿ ಘೊಷಣೆ ಮಾಡಿದರೆ ಅದೇ ವೇದಿಕೆಯಲ್ಲಿ ಅವರಿಗೆ ಸನ್ಮಾನ ಮಾಡಲಾಗುವುದು ಒಂದ ವೇಳೆ ಬೇಡಿಕೆಗೆ ಸ್ಪಂದಿಸದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು.
ಈ ಸಂದರ್ಭದಲ್ಲಿ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೊಡಿ, ಪ್ರಧಾನ ಕಾರ್ಯದರ್ಶಿ ಶರಬಸಪ್ಪ ಮಲ್ಲಪ್ಪ ಮಸಳಿ(ನಾಗಠಾಣ) ಜಿಲ್ಲಾ ಗೌರಾವಾಧ್ಯಕ್ಷ ಬಿ.ಎಂ.ಪಾಟೀಲ, ಕಾರ್ಯಾಧ್ಯಕ್ಷ ಡಾ.ಅಶೋಕ ತರಡಿ, ಸಹಕಾರ್ಯದರ್ಶಿ ಸಂಗಮೇಶ ಪುಟ್ಟಿ, ಖಜಾಂಚಿ ಬಿ.ಕೆ.ಚೌಧರಿ ಸೇರಿದಂತೆ ಸಮಾಜ ಮುಖಂಡರು ಉಪಸ್ಥಿತರಿದ್ದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಪಕ್ಕದಲ್ಲಿರುವ ಬಟನ್‌ ಪ್ರೆಸ್‌ ಮಾಡಿ)
error: Content is protected !!