ನಮ್ಮ ವಿಜಯಪುರ

ಬಸ್ ನಲ್ಲಿ ಬಿಟ್ಟಿದ್ದ 3 ಲಕ್ಷ ಮೌಲ್ಯದ ಚಿನ್ನಾಭರಣ ವಾಪಸ್, ನಿರ್ವಾಹಕನ ಪ್ರಾಮಾಣಿಕತೆಗೆ ಜನಮೆಚ್ಚುಗೆ

ಸರಕಾರ್ ನ್ಯೂಸ್ ಮುದ್ದೇಬಿಹಾಳ

ಪ್ರಯಾಣಿಕರೊಬ್ಬರು ಬಸ್‍ನಲ್ಲಿ ಬಿಟ್ಟು ಹೋಗಿದ್ದ ಅಂದಾಜು 3 ಲಕ್ಷ ಮೌಲ್ಯದ ಚಿನ್ನದ ಸಾಮಗ್ರಿ ಇರುವ ಬ್ಯಾಗ್ ಮರಳಿಸುವ ಮೂಲಕ ನಿರ್ವಾಹಕನೋರ್ವ ಪ್ರಾಮಾಣಿಕತೆ ಜೊತೆಗೆ ಕಳಕಳಿ ಮೆರೆದಿದ್ದಾರೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುದ್ದೇಬಿಹಾಳ ಸಾರಿಗೆ ಘಟಕದ ಚಾಲಕ ಕಂ ನಿರ್ವಾಹಕ ಸಿ.ಆರ್.ಪತ್ತೇಪೂರ ಅವರು ಇಂಥದ್ದೊಂದು ಜನಮೆಚ್ಚುವ ಕಾರ್ಯ ಮಾಡಿದ್ದಾರೆ.

ಮುದ್ದೇಬಿಹಾಳ-ನಾಲತವಾಡ-ನಾರಾಯಣಪುರ ತಡೆ ರಹಿತ ಬಸ್‍ಗೆ ಪತ್ತೇಪೂರ ಅವರು ಚಾಲಕ ಕಂ ನಿರ್ವಾಹಕರಾಗಿ ಕರ್ತವ್ಯದಲ್ಲಿದ್ದರು. ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಮುದ್ದೇಬಿಹಾಳದಿಂದ ನಾಲತವಾಡಕ್ಕೆ ಪ್ರಯಾಣಿಸಿದ್ದ ಮಹಿಳಾ ಪ್ರಯಾಣಿಕರೊಬ್ಬರು ಕಿವಿಯೋಲೆ, ಉಂಗುರ, ಬೋರಮಾಳ, ಚೈನ್ ಮುಂತಾದ ಚಿನ್ನದ ಆಭರಣಗಳಿದ್ದ ಬ್ಯಾಗನ್ನು ಸೀಟಿನಲ್ಲೇ ಮರೆತು ಇಳಿದು ಹೋಗಿದ್ದರು.

ಸೀಟಿನ ಮೇಲೆ ಇದ್ದ ಬ್ಯಾಗನ್ನು ಗಮನಿಸಿದ ಪತ್ತೇಪೂರ ಅವರು ಯಾರೋ ಪ್ರಯಾಣಿಕರು ಬಿಟ್ಟು ಹೋಗಿರಬಹುದು ಎಂದು ಭಾವಿಸಿ ಅದನ್ನು ಜೋಪಾನವಾಗಿ ತೆಗೆದಿರಿಸಿದ್ದರು.

ಬಸ್ ಮರಳಿ ಮುದ್ದೇಬಿಹಾಳದತ್ತ ಬಂದಾಗ ಬ್ಯಾಗ್ ಬಿಟ್ಟು ಹೋಗಿದ್ದ ಮಹಿಳೆ ಆಫ್ರೀನ್ ನಾಯ್ಕೋಡಿ ತನ್ನ ಪತಿಯ ಸಮೇತ ಇಲ್ಲಿನ ಸಾರಿಗೆ ಘಟಕಕ್ಕೆ ಧಾವಿಸಿ ಬಂದು ಇಂಥ ಬಸ್‍ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದು ಸಿಕ್ಕಿದೆಯೇ ಎಂದು ಗಾಬರಿಯಿಂದ ವಿಚಾರಿಸತೊಡಗಿದ್ದರು. ಇದನ್ನು ಗಮನಿಸಿದ ಪತ್ತೇಪೂರ ಅವರು ತಮಗೆ ಸಿಕ್ಕ ಬ್ಯಾಗನ್ನು ಘಟಕದ ಭದ್ರತಾ ಸಿಬ್ಬಂದಿ ಮತ್ತು ಸಾರಿಗೆ ನಿರೀಕ್ಷಕರ ಸುಪರ್ದಿಗೆ ಒಪ್ಪಿಸಿದ್ದರು.

ನನಗೆ ಸಿಕ್ಕ ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನದ ಆಭರಣಗಳನ್ನು ಕಳೆದುಕೊಂಡವರಿಗೆ ಮರಳಿಸಿದ ಸಂತೃಪ್ತಿ ಮೂಡಿದೆ ಎಂದರು.

ಆಭರಣ ಮರಳಿ ಸಿಕ್ಕ ಸಂತಸದಲ್ಲಿದ್ದ ಆಫ್ರೀನ್ ಮಾತನಾಡಿ ಮನೆಯಲ್ಲಿ ಮದುವೆ ಇದ್ದ ಕಾರಣ ಚಿನ್ನದ ಆಭರಣಗಳನ್ನು ಮದುವೆಯಲ್ಲಿ ಧರಿಸಲು ತೆಗೆದುಕೊಂಡು ಹೋಗುತ್ತಿದ್ದೆ. ಮರೆತು ಬ್ಯಾಗ್ ಬಿಟ್ಟು ಬಸ್ಸಿನಿಂದ ಕೆಳಗಿಳಿದಿದ್ದೆ. ನೆನಪಾದಾಗ ಬಸ್ ಹೋಗಿತ್ತು. ಕೂಡಲೇ ನನ್ನ ಗಂಡನ ಮೂಲಕ ಬಸ್ ನಿಲ್ದಾಣ, ಬಸ್ ಘಟಕ ಸಂಪರ್ಕಿಸಿ ಇಲ್ಲಿಗೆ ಓಡೋಡಿ ಬಂದೆವು. ನಮಗೆ ಹೋದ ಜೀವ ಬಂದಂತಾಗಿದೆ. ಕಂಡಕ್ಟರ್ ಅಣ್ಣನಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದಾಗ ನೆರೆದ ಜನ ಶಹಬ್ಬಾಷ್ ಎಂದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!