ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜ್ಞಾನ ಯೋಗಾಶ್ರಮಕ್ಕೆ ಭೇಟಿ, ಲಿಂ.ಸಿದ್ದೇಶ್ವರ ಶ್ರೀಗಳಿಗೆ ನಮಿಸಿದ ನಡ್ಡಾ
ಸರಕಾರ ನ್ಯೂಸ್ ವಿಜಯಪುರ
ನಡೆದಾಡುವ ದೇವರು ಎಂದೇ ಪ್ರಸಿದ್ದಿ ಪಡೆದಿದ್ದ ಪರಮಪೂಜ್ಯ ಲಿಂ.ಸಿದ್ದೇಶ್ವರ ಶ್ರೀಗಳಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶ್ರದ್ಧಾಂಜಲಿ ಸಲ್ಲಿಸಿದರು.
ಶನಿವಾರ ಜ್ಞಾನ ಯೋಗಾಶ್ರಮಕ್ಕೆ ಭೇಡಿ ನೀಡಿದ ನಡ್ಡಾ, ಲಿಂ.ಸಿದ್ದೇಶ್ವರ ಶ್ರೀಗಳ ಕೊನೆಯ ದಿನಗಳನ್ನು ಕಳೆದ ಕೋಣೆಗೆ ಭೇಟಿ ನೀಡಿ ಪೂಜ್ಯರನ್ನು ಸ್ಮರಿಸಿಕೊಂಡರು. ಆಶ್ರಮದ ಆವರಣದಲ್ಲಿಯೇ ಇರುವ ಚಿಕ್ಕ ಕೋಣೆಯಲ್ಲಿ ಶ್ರೀಗಳು ಅನಾರೋಗ್ಯ ಕಾಲದಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಕೋಣೆಗೆ ನಡ್ಡಾ ಭೇಟಿ ನೀಡಿ ಪೂಜ್ಯರನ್ನು ಕಣ್ಮನಗಳಲ್ಲಿ ತುಂಬಿಕೊಂಡರು. ಬಳಿಕ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಗದ್ದುಗೆಗೆ ನಡ್ಡಾ ಭಕ್ತಿ ಪೂರ್ವಕವಾಗಿ ನಮಿಸಿದರು.
ಸಿಂದಗಿಯಲ್ಲಿ ಆಯೋಜನೆಗೊಂಡಿರುವ ವಿಜಯ ಸಂಕಲ್ಪ ಯಾತ್ರೆ ಹಿನ್ನೆಲೆ ವಿಜಯಪುರ ಕ್ಕೆ ಆಗಮಿಸಿರುವ ನಡ್ಡಾ ನಾಗಠಾಣ ವಿಧಾನ ಸಭೆ ಕ್ಷೇತ್ರ ವ್ಯಾಪ್ತಿ ಯ ಜ್ಞಾನ ಯೋಗಾಶ್ರಮಕ್ಕೆ ಭೇಟಿ ನೀಡಿದರು. ಪೂಜ್ಯ ಲಿಂ.ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಭಕ್ತಿ ಪೂರ್ವಕ ಪ್ರಣಾಮ ಸಲ್ಲಿಸಿದರು. ಬಳಿಕ ಅಲ್ಲಿನ ಪೂಜ್ಯರುಗಳೊಂದಿಗೆ ಮಾತನಾಡಿದರು. ನಂತರ ನಾಗಠಾಣ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಹಿನ್ನೆಲೆ ಗೋಡೆ ಬರಹ, ಕರಪತ್ರ ಹಂಚಿಕೆ ಹಾಗೂ ಮಿಸ್ ಕಾಲ್ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಅಶ್ವತ್ಥನಾರಾಯಣ, ಸಂಸದ ರಮೇಶ ಜಿಗಜಿಣಗಿ ಮತ್ತಿತರರಿದ್ದರು.