ವಿಜಯಪುರ

ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ, ಭವ್ಯ ಶೋಭಾಯಾತ್ರೆ, ಎಲ್ಲೆಲ್ಲೂ ಕೇಸರಿ ಧ್ವಜಗಳ ಹಾರಾಟ

ಸರಕಾರ ನ್ಯೂಸ್‌ ವಿಜಯಪುರ

ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಪ್ರಯುಕ್ತ ಸೋಮವಾರ ನಡೆದ ಭವ್ಯ ಶೋಭಾಯಾತ್ರೆ ಮೈ ನವಿರೇಳಿಸಿತು.

ಜನತಾ ಸೇವಾ ಸಂಘದ ಸಹಯೋಗದಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಹೈದ್ರಾಬಾದ್‌ ಶಾಸಕ ರಾಜಾ ಸಿಂಗ್‌ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾರಾಜಿಸಿದರು.

ನಗರದ ಶ್ರೀರಾಮ ಮಂದಿರದಿಂದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದವರೆಗೆ ನಡೆದ ಶೋಭಾಯಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಕೇಸರಿ ಧ್ವಜಗಳ ಹಾರಾಟ, ವಾದ್ಯಗಳ ಅಬ್ಬರ, ಮುಗಿಲು ಮುಟ್ಟಿದ ಜಯಘೋಷಗಳ ನಡುವೆ ನಡೆದ ಭವ್ಯ ಶೋಭಾಯಾತ್ರೆ ಮೈ ನವಿರೇಳಿಸಿತಲ್ಲದೇ ಯುವಕರಲ್ಲಿ ಹಿಂದುತ್ವದ ಅಭಿಮಾನ ಪುಟಿದೇಳುವಂತೆ ಮಾಡಿತು.

ಜಯ ಜಯ ಜೈ ಶಿವಾಜಿ….ಅಂಭಾ ಭವಾನಿ ಘೋಷಣೆಗಳು ಪ್ರತಿಧ್ವನಿಸಿದರು. ಕೇಸರಿ ವರ್ಣದ ಶಿವ ಧ್ವಜ ಹಿಡಿದ ಯುವಕರು ಡಿಜೆ ಸದ್ದಿಗೆ ಹೆಜ್ಜೆ ಹಾಕಿದರು. ಶಿವಾಜಿ ಮಹಾರಾಜರ ಅಭಿಮಾನ  ಪ್ರತಿಬಿಂಬಿಸುವ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.

ಶಿವಾಜಿ ಶೋಭಾಯಾತ್ರೆ-೨
ವಿಜಯಪುರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ಆಯೋಜಿಸಿದ ಶೋಭಾಯಾತ್ರೆಯಲ್ಲಿ ಗಮನ ಸೆಳೆದ ಕಲಾತಂಡಗಳು.

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಆಕರ್ಷಣೀಯವಾಗಿತ್ತು. ಶಿವಾಜಿ ಮಹಾರಾಜರ ವೇಷ ಧರಿಸಿ ಅಶ್ವಾರೋಹಿಯಾದ ಯುವಕರು ಜನಮನ ಸೆಳೆದರು. ವಿವಿಧ ಕಲಾ ತಂಡಗಳು, ವಾದ್ಯಗಳು ಶೋಭಾಯಾತ್ರೆಗೆ ಮೆರಗು ನೀಡಿದವು.

ಭಾರತ ಕಾ ಬಚ್ಚಾ…ಬಚ್ಚಾ….ಏಕ ಹೀ ನಾರಾ ಬೋಲೇಗಾ…., ಜಯ ಶ್ರೀರಾಮ…ಎಂಬ ಘೋಷಣೆಗಳು ಮಾರ್ದನಿಸಿದವು. ದಾರಿಯುದ್ದಕ್ಕೂ ಶಿವಾಜಿ ಮಹಾರಾಜರ ಭವ್ಯ ಪ್ರತಿಮೆಗೆ ಪುಷ್ಪವೃಷ್ಟಿಗೈಯಲಾಯಿತು. ಓಂಕಾರ ನಾಮ, ಭಗವಾನ ಶ್ರೀರಾಮ ಅವರ ಭಾವಚಿತ್ರವುಗಳ್ಳ ಬೃಹತ್ ಬಾವುಟಗಳನ್ನು ಯುವಜನತೆ ಭಕ್ತಿ ಭಾವದಿಂದ ಮೆರವಣಿಗೆಯುದ್ದಕ್ಕೂ ಪ್ರದರ್ಶಿಸಿದರು.

ಸಾಲಂಕೃತ ವಾಹನದಲ್ಲಿ ಆಂಧ್ರ ಶಾಸಕ ರಾಜಾ ಸಿಂಗ್, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಆಯೋಜಕರಾದ ಶುಭಂ ವಾಡೇಕರ ಮೊದಲಾದವರು ಸಹ ಜನಸ್ತೋಮಕ್ಕೆ ಕೈ ಮುಗಿಯುತ್ತಾ ಸಾಗಿದರು. ಅನೇಕ ಯುವಕರು ಹಿಂದೂ ಫೈರ್ ಬ್ರ್ಯಾಂಡ್ ರಾಜಾಸಿಂಗ್ ಅವರಿಗೆ ಮಾಲಾರ್ಪಣೆ ಮಾಡಿ, ತಿಲಕ ವಿರಿಸಿ ವಿಜಯ ಘೋಷ ಮೊಳಗಿಸಿದ ದೃಶ್ಯ ಎಲ್ಲೆಡೆ ಕಂಡು ಬಂದಿತು.

ಭೀಕರ ಅಪಘಾತ, ಕಾರು- ಟಾಟಾ ಏಸ್ ನುಜ್ಜುಗುಜ್ಜು, ಯಾರಿಗೆ ಏನಾಯ್ತು?

ರಾಮ‌ ಮಂದಿರದಿಂದ ಆರಂಭಗೊಂಡ ಭವ್ಯ ಶೋಭಾಯಾತ್ರೆ, ಶ್ರೀ ಸಿದ್ದೇಶ್ವರ ದೇವಾಲಯ, ಗಾಂಧಿ ವೃತ್ತ ಸೇರಿದಂತೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಶ್ರೀ ಶಿವಾಜಿ ಮಹಾರಾಜರ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು‌. ಅಲ್ಲಿ ಭವ್ಯ ಮಂಟಪದೊಂದಿಗೆ ಶಿವಾಜಿ ವೃತ್ತಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಶೋಭಾಯಾತ್ರೆ ಸಂಪನ್ನಗೊಳಿಸಲಾಯಿತು.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!