ಪ್ರೀತಿ ತ್ಯಾಗ ಮಾಡಿದ್ದ, ಸಲುಗೆ ಬಿಟ್ಟಿದ್ದ, ಆದರೂ ಕೈಕಾಲು ಕಟ್ಟಿ ರಾಡ್‌ನಿಂದ ಹೊಡೆದರು, ಏನಿದು ಪ್ರೇಮ ಕಹಾನಿ…..!
ಸರಕಾರ್ ನ್ಯೂಸ್ ವಿಜಯಪುರ
ಪ್ರೀತಿ ಮಾಡಿದ್ದ, ಸಲುಗೆಯಿಂದ ವರ್ತಿಸಿದ್ದ, ಕೊನೆಗೆ ಹುಡುಗಿ ಮನೆಯವರು ತಾಕೀತು ಮಾಡಲಾಗಿ ಆಕೆಯಿಂದ ದೂರವಿದ್ದ! ಆದರೂ, ತೋಟಕ್ಕೆ ಕರೆದೊಯ್ದು ಕೈ ಕಾಲು ಕಟ್ಟಿ ರಾಡ್ ನಿಂದ ಹಲ್ಲೆ ನಡೆಸಿ ಯುವಕನ ಕೊಲೆಗೆ ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಮಹೇಶ ಗೋವಿಂದ ಕ್ಯಾತನ್ ಎಂಬುವವರ ಹೊಲದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಸುನೀಲ ಬಾಬು ಜೊಲ್ಲಿ (23) ಎಂಬಾತ ಹಲ್ಲೆಗೆ ಒಳಗಾದ ಯುವಕ.
ಸುನೀಲ ಐಟಿಐ ಕಲಿತಿದ್ದು ಸದ್ಯ ಯಾವುದೇ ಉದ್ಯೋಗದಲ್ಲಿಲ್ಲ. ಓಣಿಯ ಸ್ವಪ್ನಾ ಬಾಳಪ್ಪ ಕ್ಯಾತನ ಎಂಬುವಳೊಂದಿಗೆ ಪ್ರೀತಿ ಮಾಡಿ ಸಲುಗೆಯಿಂದ ಇದ್ದನು. ಈ ಬಗ್ಗೆ ಅವಳ ಮನೆಯವರು ಸುನೀಲಗೆ ಹಿರಿಯ ಮುಖಾಂತರ ಎಚ್ಚರಿಕೆ ನೀಡಿದ್ದರು. ಸ್ವಪ್ನಾಳ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಂತೆ ತಾಕೀತು ಮಾಡಿದ್ದರು. ಆ ಪ್ರಕಾರ ಸುನೀಲ ಕೂಡ ದೂರ ಇದ್ದನು. ಆದರೂ, ಸ್ವಪ್ನಾಳ ಮನೆಯವರು ಸುನೀಲಗೆ ಹೊಡೆದು ಖಲಾಸ್ ಮಾಡುತ್ತೇವೆಂದು ತಿರುಗಾಡುತ್ತಿದ್ದರು.
ತೋಟಕ್ಕೆ ಕರೆದೊಯ್ದು ಹಲ್ಲೆ:
ಹೀಗಿರುವಾಗ ಜ. 9ರಂದು ಓಣಿಯ ಸಚಿನ ಅಶೋಕ ಅವಧಿ ಎಂಬಾತ ಸುನೀಲನನ್ನು ಪೆಟ್ರೋಲ್ ತೆಗೆದುಕೊಂಡು ಬರೋಣ ಬಾ ಎಂದು ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಬಾಳಪ್ಪ ಮುಕುಂದು ಕ್ಯಾತನ್, ರಾಘವೇಂದ್ರ ಬಾಳಪ್ಪ ಕ್ಯಾತನ್ ಹಾಗೂ ದೀಪಕ ಧರೆಪ್ಪ ಕ್ಯಾತನ ಇವರು ಮೋಟರ್ ಸೈಕಲ್ ಮೇಲೆ ಬಂದು ಸುನೀಲನನ್ನು ಅಡ್ಡಗಟ್ಟಿ ಆತನನ್ನು ಕರೆದುಕೊಂಡು ಮಹೇಶ ಕ್ಯಾತನ ತೋಟಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಸುನೀಲಗೆ ಕೈಕಾಲು ಕಟ್ಟಿ ಕಬ್ಬೀಣದ ರಾಡ್‌ನಿಂದ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಬಳಿಕ ಸುನೀಲನನ್ನು ಆತನ ಮನೆಗೆ ತಂದು ಬಿಟ್ಟಿದ್ದಾರೆ.
ಗಾಬರಿಗೊಂಡ ಅಣ್ಣ:
ಮನೆಯಲ್ಲಿ ನರಳುತ್ತಾ ಬಿದ್ದ ಸುನೀಲನನ್ನು ಕಂಡ ಅವರ ಅಣ್ಣ ಅನೀಲ ಗಾಬರಿಗೊಂಡಿದ್ದಾನೆ. ಬಳಿಕ ಏನಾಗಿದೆ ಎಂದು ವಿಚಾರಿಸಲಾಗಿ ಸುನೀಲ ನಡೆದ ಘಟನೆ ತಿಳಿಸಿದ್ದಾನೆ. ಬಳಿಕ ಸುನೀಲನ್ನು ಕರೆದುಕೊಂಡು ವಿಜಯಪುರ ಸರಕಾರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಜ. 12ರಂದು ತಿಕೋಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)