ವಿಜಯಪುರ

ಶಾಸಕ ಯತ್ನಾಳ- ರಾಜಾಸಿಂಗ್ ವಿರುದ್ಧ ಎಫ್‌ಐಆರ್, ಎಲ್ಲಿ? ಕಾರಣವೇನು ಗೊತ್ತಾ?

ಸರಕಾರ ನ್ಯೂಸ್ ವಿಜಯಪುರ

ಆಂಧ್ರಪ್ರದೇಶದ ಶಾಸಕ ರಾಜಾಸಿಂಗ್ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪ್ರಚೋದನಕಾರಿ ಭಾಷಣ ಹಾಗೂ ಮುಸ್ಲಿಂರ ಅವಹೇಳನ ಹಿನ್ನೆಲೆ ದೂರು ದಾಖಲಿಸಲಾಗಿದೆ. ಮಾ.4 ರಂದು ವಿಜಯಪುರ ನಗರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ನಡೆದ ಶೋಭಾಯಾತ್ರೆಯಲ್ಲಿ ಈ ಇಬ್ಬರು ಶಾಸಕರು ಮುಸ್ಲಿಂರ ವಿರುದ್ಧ ಅವಾಚ್ಯ ಪದ ಬಳಸಿದ್ದು, ಅಲ್ಲದೇ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಕ್ರಮಕ್ಕೆ ಆಗ್ರಹಿಸಿ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಹ್ಮದ್ ರಫೀಕ್ ಟಪಾಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಛತ್ರಪತಿ ಶಿವಾಜಿ ಮಹಾರಾಜರು ಈ ದೇಶ ಕಂಡ ಅಪ್ರತಿಮ ನಾಯಕ. ಜಾತ್ಯತೀತವಾದಿಯಾಗಿದ್ದ ಶಿವಾಜಿಯ ಸೈನ್ಯದಲ್ಲಿ ಅನೇಕರು ಮುಸ್ಲಿಂರಿದ್ದರು. ಅವರ ಸೈನ್ಯದಲ್ಲಿ ಶೇ. 40 ರಷ್ಟು ಮುಸ್ಲಿಂರಿದ್ದರು, ಅವರ ಅಂಗರಕ್ಷಕರ ಪೈಕಿ ಶೇ.60 ರಷ್ಟು ಮುಸ್ಲಿಂರಿದ್ದರು. ಅಫಜಲ್ ಖಾನ್ ಹತ್ಯೆಗೆ ಶಿವಾಜಿ ಬಳಸಿದ ಹುಲಿ ಉಗುರು ಸಹ ಮುಸ್ಲಿಂ ವ್ಯಕ್ತಿಯೇ ನೀಡಿದ್ದು. ಇಂಥ ಯಾವುದೇ ವಿಚಾರ ಬಿಜೆಪಿ ನಾಯಕರು ಹೇಳುವುದಿಲ್ಲ. ಕೇವಲ ಮುಸ್ಲಿಂ ವಿರುದ್ದ ಎತ್ತಿ ಕಟ್ಟಲು ಶಿವಾಜಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.

ಛತ್ರಪತಿ ಶಿವಾಜಿ ಜಯಂತಿ ನೆಪದಲ್ಲಿ ಶಾಸಕರಾದ ರಾಜಾಸಿಂಗ್ ಹಾಗೂ ಯತ್ನಾಳ ತಮ್ಮ ರಾಜಕೀಯ ಹಿತಾಸಕ್ತಿ ಈಡೇರಿಸಿಕೊಳ್ಳುತ್ತಿದ್ದಾರೆ. ಶೋಭಾಯಾತ್ರೆ ಬಳಿಕ ಶಿವಾಜಿ ಮಹಾರಾಜರ ಆದರ್ಶಗಳ ಬಗ್ಗೆ ಮಾತನಾಡದೇ ಮುಸ್ಲಿಂರನ್ನು ಕುರಿತು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಶಿವಾಜಿಯ ಆಡಳಿತ ಎಂಥದ್ದು, ಅವರ ಆದರ್ಶದ ಬಗ್ಗೆ ಮಾತನಾಡದೇ ಕೇವಲ ಮುಸ್ಲಿಂರ ಅವಹೇಳನಕ್ಕೆ ಭಾಷಣ ಸೀಮಿತಗೊಳಿಸಿದ್ದಾರೆ. ಆ ಮೂಲಕ ಶಿವಾಜಿ ಅವರ ಆದರ್ಶಗಳನ್ನು ಗಾಳಿಗೆ ತೂರಿದ್ದಾರೆ ಎಂದರು.

ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಶಿವಾಜಿ ಮಹಾರಾಜರು ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ದ ಮಾಡಿದರೇ ವಿನಃ ಯಾವುದೇ ಧರ್ಮ, ಜಾತಿ ಆಧರಿಸಿ ಅಲ್ಲ. ಇದೇ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಮಾಡಲು ಅಂದಿನ ಪಂಡಿತ ಪಾಮರರು ಬರಲಿಲ್ಲ. ಕಾರಣ ಅಂದಿನ ಜಾತಿ ವ್ಯವಸ್ಥೆಯ ಬಿಸಿ ಶಿವಾಜಿ ಅವರನ್ನೂ ತಟ್ಟಿತ್ತು. ಈ ಬಗ್ಗೆ ಯತ್ನಾಳ ಅವರು ಮಾತನಾಡಲ್ಲ. ಹೀಗಾಗಿ ಹಿಂದು ಸಮಾಜದ ನಿಜವಾದ ವಿರೋಧಿ ಎಂದರೆ ಯತ್ನಾಳ ಎಂದರು.

ದಲಿತರು ಹಿಂದುಗಳ ಹೌದೋ ಅಲ್ಲವೋ? ಎಂಬುದನ್ನು ಯತ್ನಾಳ ಸ್ಪಷ್ಟಪಡಿಸಲಿ. ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಹಿತದೃಷ್ಠಿಯಿಂದ ಮಾಡಿದ ಜಾತಿಗಣತಿ ವರದಿ ಬಗ್ಗೆ ಯತ್ನಾಳ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಇವರು ಪ್ರಥಮ ಹಿಂದು ವಿರೋಧಿಗಳು ಎಂದರು.

ರಾಜಕಾರಣಕ್ಕಾಗಿ ಹಿಂದು ಪದ ಬಳಕೆಯನ್ನು ಯತ್ನಾಳ ನಿಲ್ಲಿಸಬೇಕು. ಮಹಾತ್ಮ ಬಸವೇಶ್ವರ ಅವರ ನಾಡಿನಲ್ಲಿ ಹುಟ್ಟಿ ಬಸವಣ್ಣ ಎಂದು ಹೆಸರಿಟ್ಟುಕೊಂಡು, ಬಸವಣ್ಣನವರ ಆದರ್ಶಗಳನ್ನು ಗಾಳಿಗೆ ತೂರುತ್ತಿರುವ ಯತ್ನಾಳ ಹಿಂದು ವಿರೋಧಿ ಅಲ್ಲದೇ ಮತ್ತಿನ್ನೇನು? ಎಂದರು.

ಕರವೇ ಮುಖಂಡ ಎಂ.ಸಿ. ಮುಲ್ಲಾ ಮಾತನಾಡಿ, ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಈ ಬಗ್ಗೆ ಚಕಾರವೆತ್ತದ ಯತ್ನಾಳ ಪಾಕಿಸ್ತಾನ ಜಪ ಮಾಡುತ್ತಿದ್ದಾರೆ. ವಿಜಯಪುರದಲ್ಲಿಯೇ ಪಾಕಿಸ್ತಾನ ಧ್ವಜ ಹಾರಿಸಿದಾಗ ಯತ್ನಾಳ ಏಕೆ ಸುಮ್ಮನಿದ್ದರು? ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದವರು ಯಾರು? ಅವರನ್ನೇಕೆ ಅಶ್ಲೀಲವಾಗಿ ಯತ್ನಾಳರು ಬೈಯುತ್ತಿಲ್ಲ? ಎಂದು ಕೇಳಿದರು.

ಕಾಂಗ್ರೆಸ್ ಮುಖಂಡ ಡಾ.ಗಂಗಾಧರ ಸಂಬಣ್ಣಿ, ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, ಯತ್ನಾಳ ನಡೆ ಖಂಡಿಸಿದರು. ಮುಖಂಡರಾದ ಶಕೀಲ ಗಡೇದ, ಫಯಾಜ್ ಕಲಾದಗಿ, ನಸೀಂ ರೋಜಿನದಾರ, ದಾದಾಪೀರ ಮುಜಾವರ ಮತ್ತಿತರರಿದ್ದರು.

error: Content is protected !!