ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ಕಳಕಳಿ, ಕ್ರೀಡಾಕ್ಷೇತ್ರ ಬಲವರ್ಧನೆಗೆ ಸದನದಲ್ಲಿ ಹಕ್ಕೊತ್ತಾಯ
ವಿಜಯಪುರ: ರಾಜ್ಯದ ಪ್ರಪ್ರಥಮ ವೆಲೊಡ್ರೊಂ ನಿರ್ಮಾಣ ಕಾಮಗಾರಿ ವಿಜಯಪುರದಲ್ಲಿ ಕೈಗೊಳ್ಳಲಾಗಿದ್ದು ಈವರೆಗೂ ಪೂರ್ಣಗೊಂಡಿಲ್ಲ. ಹೀಗಾಗಿ ವೆಲೊಡ್ರೊಂ ಪೂರ್ಣಗೊಳಿಸಿ ಸೈಕ್ಲಿಸ್ಟ್‌ಗಳ ಕನಸು ನನಸು ಮಾಡಬೇಕು ಎಂದು ನಾಗಠಾಣ ಶಾಸಕ ಡಾ.ದೇವಾನಂದ ಚವ್ಹಾಣ್ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು.
ಬುಧವಾರ ಬೆಂಗಳೂರಿನ ವಿಧಾನ ಮಂಡಲ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಸರ್ಕಾರದ ಗಮನ ಸೆಳೆದ ಅವರು, ಕ್ರೀಡಾಕ್ಷೇತ್ರದ ಬಲವರ್ಧನೆಗೆ ವೆಲೊಡ್ರೋಂ ನಿರ್ಮಾಣ ಮಾಡಬೇಕು. ಜೊತೆಗೆ ನೂತನ ಚಡಚಣದಲ್ಲಿ ತಾಲೂಕು ಕೇಂದ್ರದಲ್ಲಿ ಕ್ರೀಡಾಂಗಣ ನಿರ್ಮಿಸಬೇಕೆಂದರು.
ಚಡಚಣದಲ್ಲಿ ಕ್ರೀಡಾಂಗಣ ಇಲ್ಲದೇ ಇರುವುದರಿಂದ ಕ್ರೀಡಾಪಟುಗಳಿಗೆ ಆಗುತ್ತಿರುವ ತೊಂದರೆ, ದೇಶಿ ಕ್ರೀಡೆಯ ಭಾಗವಾಗಿರುವ ಕುಸ್ತಿಗೆ ಪ್ರೋತ್ಸಾಹಿಸುವ ಕ್ರಮಗಳು, ಕ್ರೀಡಾ ಪಟುಗಳಿಗೆ ಸರಿಯಾದ ಸೌಲಭ್ಯಗಳು ಲಭ್ಯವಾಗುತ್ತಿವೆಯೋ ಇಲ್ಲವೋ ಎಂಬಿತ್ಯಾದಿ ಕ್ರೀಡೆ, ಕ್ರೀಡಾ ಪಟುಗಳ ಹಿತರಕ್ಷಣೆಗೆ ಸಂಬಂಧಿಸಿದಂತೆ ವಿಷಯ ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದರು.
ಇದಕ್ಕೆ ಉತ್ತರ ನೀಡಿದ ಕ್ರೀಡಾ ಸಚಿವ ನಾರಾಯಣಗೌಡ, ಈಗಾಗಲೇ ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳಿಗೆ ನಿವೇಶನ ಒದಗಿಸುವಂತೆ ಆದೇಶಿಸಿದೆ. ನಿವೇಶನ ದೊರಕಿದ ನಂತರ ಅನುದಾನ ಒದಗಿಸಿ ಕ್ರೀಡಾಂಗಣ ನಿರ್ಮಿಸುವುದಾಗಿ ಭರವಸೆ ನೀಡಿದರು.
ಈ ಉತ್ತರದಿಂದ ತೃಪ್ತರಾಗದ ಡಾ.ದೇವಾನಂದ ಚವ್ಹಾಣ್, ಚಡಚಣ ನೂತನ ತಾಲೂಕಾಗಿ ರಚನೆಯಾಗಿದೆ, ಕ್ರೀಡಾಂಗಣಕ್ಕಾಗಿ ಜಾಗ ಹುಡಕಲು ನಾಲ್ಕು ವಷರ್ಗಳು ಉರುಳಿವೆ, ನಿವೇಶನ ಹುಡುಕಾಟದಲ್ಲಿ ಕಾಲ ಕಳೆದರೆ ಕ್ರೀಡಾಂಗಣ ನಿರ್ಮಾಣವಾಗಿ ಕ್ರೀಡಾಪಟುಗಳಿಗೆ ನೆರವಾಗುವುದು ಯಾವಾಗ? ಎಂದು ಮರು ಪ್ರಶ್ನೆ ಮಾಡಿದರು. ಅಲ್ಲದೇ, ಆದ್ಯತೆ ಮೇರೆಗೆ ಈ ಕಾರ್ಯ ಕೈಗೊಳ್ಳಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ವೆಲೊಡ್ರೊಂ ನಿರ್ಮಾಣ ಕಾಮಗಾರಿ ವಿಳಂಬವಾಗುತ್ತಿರುವ ವಿಷಯವನ್ನು ಸಹ ಶಾಸಕ ಡಾ.ದೇವಾನಂದ ಪ್ರಸ್ತಾಪಿಸಿದರು. ಆಗ ಸಚಿವ ನಾರಾಯಣಸ್ವಾಮಿ ಉತ್ತರಿಸಿ, ಈ ಕಾಮಗಾರಿ ವಿಳಂಬವಾಗಿರುವುದು ನಿಜ, ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಎಲ್ಲವೂ ಹದಗೆಟ್ಟಿತ್ತು, ಪುಣೆ, ಹೈದರಾಬಾದ್ ಮೊದಲಾದ ಕಡೆ ವಿಶೇಷ ಪರಿಣಿತರ ತಂಡ ಕಳುಹಿಸಿ ತಾಂತ್ರಿಕ ತೊಂದರೆ ನಿವಾರಿಸಿ ಈಗ ಪುನ: ಕಾಮಗಾರಿ ಆರಂಭಿಸಲಾಗಿದೆ ಎಂದು ಉತ್ತರ ನೀಡಿದರು.