ರಮೇಶ ಜಿಗಜಿಣಗಿ ಬಂಜಾರ ಸಮುದಾಯದ ಕ್ಷಮೆ ಯಾಚಿಸಬೇಕು, ಅರ್ಜುನ ರಾಠೋಡ ನೀಡಿದ ಮಹತ್ವದ ಕರೆ ಏನು ಗೊತ್ತಾ?
ಸರಕಾರ ನ್ಯೂಸ್ ವಿಜಯಪುರ
ಬಂಜಾರಾ ಸಮುದಾಯದ ಬಗ್ಗೆ ಕೀಳು ಪದ ಬಳದಿಸ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಕೂಡಲೇ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ಬಂಜಾರಾ ಮಹಾಸಭಾದ ಅಧ್ಯಕ್ಷ ಅರ್ಜುನ ರಾಠೋಡ ಆಗ್ರಹಿಸಿದ್ದಾರೆ.
ಬಿಜೆಪಿ ಬಂಜಾರಾ ಸಮುದಾಯಕ್ಕೆ ಟಿಕೆಟ್ ತಪ್ಪಿದ್ದರಿಂದ ಸಹಜವಾಗಿಯೇ ಆ ಸಮುದಾಯ ಅಸಮಾಧಾನಗೊಂಡಿದೆ. ಹೀಗಾಗಿ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದರೆ ಹೀನವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಬಂಜಾರಾ ಸಮುದಾಯದವರು ಯಾರು? ಇಲ್ಲಿಗೆ ಏಕೆ ಬಂದಿದ್ದಾರೆ? ಬಂದವರು ತಮ್ಮ ಕೆಲಸ ಮಾಡಿಕೊಂಡು ಹೋಗಬೇಕು, ಅವರ ಮತ ನಮಗೆ ಬೇಡ ಎಂದಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನಮ್ಮ ಸಮುದಾಯ ಬಿಜೆಪಿಯನ್ನು ಬೆಂಬಲಿಸುವುದಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಬಂಜಾರಾ ಸಮುದಾಯವನ್ನು ಮೊದಲಿನಿಂದಲೂ ಜಿಗಜಿಣಗಿ ಅವರು ಕಡೆಗಣಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರು ಸಮುದಾಯದ ಕ್ಷಮೆ ಯಾಚಿಸುವಂತೆ ಪಕ್ಷದ ಹೈಕಮಾಂಡ್ ಸೂಚನೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ದೊಡ್ಡ ಪ್ರಮಾಣದ ಹೊಡೆತ ಪಕ್ಷಕ್ಕೆ ಬೀಳಲಿದೆ ಎಂದು ಅರ್ಜುನ ರಾಠೋಡ ತಿಳಿಸಿದರು.
ಕಾಂಗ್ರೆಸ್ ಸಾಕಷ್ಟು ಅವಕಾಶಗಳನ್ನು ನಮ್ಮ ಸಮುದಾಯಕ್ಕೆ ನೀಡಿದೆ. ಸತತ ಮೂರು ಬಾರಿ ಪ್ರಕಾಶ ರಾಠೋಡಗೆ ಅವಕಾಶ ಕಲ್ಪಿಸಿದೆ. ಸಾಲದ್ದಕ್ಕೆ ವಿಧಾನ ಪರಿಷತ್ ಸದಸ್ಯರನ್ನಾಗಿಸಿದೆ. ಕಾಂತಾ ನಾಯಕಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿಸಲಾಗಿದೆ. ಹೀಗಾಗಿ ನಮ್ಮ ಸಮುದಾಯದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರಗೆ ಬೆಂಬಲಿಸುತ್ತೇವೆ. ರಾಜು ಆಲಗೂರ ಗೆಲುವು ಶತಃ ಸಿದ್ಧ ಎಂದರು.
ಹಿರಿಯರಾದ ಡಿ.ಎಲ್. ಚವಾಣ್, ಮಹಾನಗರ ಪಾಲಿಕೆ ಸದಸ್ಯ ರಾಜು ಚವಾಣ್, ರಾಜು ಜಾಧವ, ವಾಮನ ಚವಾಣ್, ಲಲಿತಾ ದೊಡಮನಿ, ಸರಿತಾ ನಾಯಕ, ಡಾ. ಪ್ರವೀಣ ಚೌರ್, ಶೈಲೇಜಾ ನಾಯಕ, ವೀಣಾ ರಾಠೋಡ, ರವಿದಾಸ ಮೇಗು ಜಾಧವ, ಬಿ.ಬಿ. ಲಮಾಣಿ ಮತ್ತಿತರರಿದ್ದರು.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)