ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023; ಜಾಹೀರಾತು ಫಲಕ ಅಳವಡಿಕೆ ನಿಷೇಧಿಸಿ ಆದೇಶ
ಸರಕಾರ ನ್ಯೂಸ್ ವಿಜಯಪುರ
ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಗಳಾಗಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಕಾಣುವಂತೆ ಗೋಡೆ ಬರಹ, ಜಾಹೀರಾತು, ಪೋಸ್ಟರ್ ಅಳವಡಿಸುವುದು, ಸೇರಿದಂತೆ ಇನ್ನಿತರ ಫಲಕ ಹಾಕುವ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿಗೆ ವಿರೂಪಗೊಳಿಸುವುದನ್ನು ನಿಷೇಧಿಸಿ ಕಟ್ಟುನಿಟ್ಟಾಗಿ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಸ್ಥಳೀಯ ಪ್ರಾಧಿಕಾರದ ಲಿಖಿತ ಅನುಮತಿ ಇಲ್ಲದೇ, ಯಾವುದೇ ತರಹದ ಗೋಡೆ ಬರಹ ಮಾಡುವುದಾಗಲಿ, ಜಾಹೀರಾತು ಫಲಕಗಳನ್ನು ಪ್ರದರ್ಶಿಸುವುದಾಗಲಿ, ಪೋಸ್ಟರ್‍ಗಳ ಅಂಟಿಸುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಿ ವಿರೂಪಗೊಳಿಸಬಾರದು. ಇಂತಹ ಕಾರ್ಯಗಳಿಗೆ ಕುಮ್ಮಕ್ಕು ಮತ್ತು ಸಲಹೆ ನೀಡುವವರನ್ನು ಆರು ತಿಂಗಳ ಕಾರಾಗೃಹ ಶಿಕ್ಷೆ ಸೇರಿದಂತೆ ದಂಡ ಸಹ ವಿಧಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.