ಕೇವಲ 300 ರೂ.ಗಳಿಗಾಗಿ ಆರಂಭವಾದ ಜಗಳ, ಕೊಲೆಯಲ್ಲಿ ಅಂತ್ಯವಾದ ಸ್ನೇಹಿತರ ಕಲಹ, 24 ಗಂಟೆಯಲ್ಲಿ ಆರೋಪಿ ಅರೆಸ್ಟ್ !
ವಿಜಯಪುರ: ಆಸ್ತಿಗಾಗಿ, ಹಳೇ ವೈಷಮ್ಯಗಳಿಗಾಗಿ, ಮರ್ಯಾದೆಗಾಗಿ ಕೊಲೆಗಳಾಗುವುದನ್ನು ಕಂಡಿದ್ದೇವೆ. ಮತ್ತು ಕೇಳಿದ್ದೇವೆ. ಆದರೆ ಇಲ್ಲೊಂದು ಕೊಲೆ ಪ್ರಕರಣ ತೀರ ವಿಚಿತ್ರವಾಗಿದ್ದು ಕೇವಲ 300 ರೂ.ಗಳಿಗಾಗಿ ಸ್ನೇಹಿತನನ್ನೇ ಕೊಲೆಗೈಯ್ಯಲಾಗಿದೆ. ಕೊಲೆ ಆರೋಪಿಯನ್ನು ಪೊಲೀಸರು 24 ಗಂಟೆಯಲ್ಲಿ ಹೆಡೆಮುರಿ ಕಟ್ಟಿತಂದಿದ್ದಾರೆ.
ಇಲ್ಲಿನ ಐತಿಹಾಸಿಕ ಗೋಳಗುಮ್ಮಟ ಹತ್ತಿರ ಜೂ. 4ರಂದು ನಡೆದ ಕೊಲೆ ಪ್ರಕರಣವನ್ನು ಕೇವಲ 24 ಗಂಟೆಯಲ್ಲಿ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಸ್ಥಳೀಯ ಚಪ್ಪರಬಂದ ಗಲ್ಲಿ ನಿವಾಸಿ ಜಾವೀದ ಇಬ್ರಾಹಿಂಸಾಬ್ ಸೌದಾಗರ ಬಂಧಿತ ಆರೋಪಿ.
ಘಟನೆ ವಿವರ:
ಜೂ. 4ರಂದು ಗೋಳಗುಮ್ಮಟ ಬಳಿ ಹಾಡಹಗಲೇ ಕೊಲೆ ನಡೆದಿತ್ತು. ಸ್ಥಳೀಯ ಸ್ಟೇಷನ್ ರಸ್ತೆ ಬಳಿಯ ನಿವಾಸಿ ಆಟೋ ಚಾಲಕ ವಿರೇಶ ಶಿವಾನಂದ ಬಂಥನಾಳ (22) ಕೊಲೆಯಾಗಿದ್ದನು. ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಬಗ್ಗೆ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆಗೆ ಸಿಪಿಐ ರಮೇಶ ಸಿ.ಅವಜಿ ನೇತೃತ್ವದಲ್ಲಿ ಪಿಸಿಐ ಸೀತಾರಾಮ, ಎಸ್.ಆರ್. ಹಂಗರಗಿ, ಪ್ರಭು ಹಿಪ್ಪರಗಿ, ಎಚ್.ಎಂ. ಪಠಾಣ, ಎಚ್.ಎನ್. ಬಾಗವಾನ, ಎ.ಎಸ್. ರಂಗಪ್ಪಗೋಳ, ಕುಶಾ ರಾಠೋಡ, ಮಹಾದೇವ ಅಡಿಹುಡಿ, ಎಸ್.ಎಲ್. ಕಲಾದಗಿ, ಬಿ.ಎಂ. ಮಕಣಾಪುರ, ಅಬ್ದುಲ್‌ಖಾದಿರ ಕೋಲೂರ, ಹನಮಂತ ಪೂಜಾರಿ, ಜಟ್ಟೆಪ್ಪ ಬಿರಾದಾರ, ಪುಂಡಲೀಕ ಬಿರಾದಾರ ಇವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಎಸ್.ಪಿ. ಎಚ್.ಡಿ. ಆನಂದಕುಮಾರ ಹಾಗೂ ಎಎಸ್‌ಪಿ ರಾಮ ಅರಸಿದ್ದಿ ಮಾರ್ಗದರ್ಶನದಲ್ಲಿ ಕಾರ್ಯಾಚಾರಣೆ ನಡೆಸಿದ ತಂಡ 24 ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದೆ.
ವಿಚಾರಣೆ ವೇಳೆ ಬಯಲಾದ ಸತ್ಯ:
ಮೃತ ಶಿವಾನಂದ ಬಂಥನಾಳ ತನ್ನ ಗೆಳೆಯ ಜಾವೀದ ಇಬ್ರಾಹಿಂಸಾಬ ಸೌದಾಗರ ಈತನ ಕಡೆಯಿಂದ ಆಟೋ ರಿಪೇರಿಗಾಗಿ 300 ರೂ.ಸಾಲ ಪಡೆದಿದ್ದನು. ಜೂ. 54ರಂದು ಜಾವೀದ ಚಪ್ಪರಬಂದ ಓಣಿಯ ಪುಂಗಿವಾಲೆ ಇವರ ಝರಾಕ್ಸ್ ಅಂಗಡಿ ಬಳಿ ಜಗಳಾ ತೆಗೆದು 300 ರೂ.ಕೊಡುವಂತೆ ಒತ್ತಾಯಿಸಿದ್ದಾನೆ. ಮಾತಿಗೆ ಮಾತು ಬೆಳೆದು ಕಟ್ಟಡ ನಿರ್ಮಾಣ ಸ್ಥಳದಲ್ಲಿದ್ದ ಸಲಿಕೆಯಿಂದ ಜಾವೀದ ಶಿವಾನಂದನ ತಲೆಗೆ ಬಲವಾಗಿ ಹೊಡೆದಿದ್ದು ಶಿವಾನಂದ ಸ್ಥಳದಲ್ಲೇ ಸಾವಿಗೀಡಾಗಿದ್ದನು. ಬಳಿಕ ಆರೋಪಿ ಜಾವೀದ ತಲೆ ಮರಿಸಿಕೊಂಡಿದ್ದನು. ಇದೀಗ ಪೊಲೀಸರು ಬಂಧಿಸಿ ವಿಚಾರಣೆ ನಡೆಸಲಾಗಿ ಘಟನೆ ಹಿನ್ನೆಲೆ ಗೊತ್ತಾಗಿದೆ. ಪೊಲೀಸರ ಸಾಧನೆಗೆ ಎಸ್‌ಪಿ ಆನಂದಕುಮಾರ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.