ಭೀಮಾಶಂಕರ ಸಕ್ಕರೆ ಕಾರ್ಖಾನೆ ದಾಖಲೆ, ರಾಜ್ಯದಲ್ಲೇ ಮಾದರಿ ಕೆಲಸ, ಯಶವಂತರಾಯಗೌಡರ ಈ ಕಾರ್ಯಕ್ಕೆ ರೈತರ ಮೆಚ್ಚುಗೆ…!
ವಿಜಯಪುರ: ರಾಜ್ಯದ ಪ್ರತಿಷ್ಟಿತ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಭೀಮಾಶಂಕರ ಸಕ್ಕರೆ ಕಾರ್ಖಾನೆಯೂ ಒಂದು.
ಭೀಮಾತೀರದ ರೈತರ ಬಹುದಿನದ ಕನಸಾಗಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಇದೀಗ ನಾಡು ಮೆಚ್ಚುವ ಕೆಲಸ ಮಾಡಿದ್ದಾರೆ.
ಪ್ರಸಕ್ತ ವರ್ಷ ಕಬ್ಬು ಪೂರೈಸಿದ ಎಲ್ಲ ರೈತರಿಗೂ ಪ್ರತಿ ಟನ್ ಕಬ್ಬಿಗೆ 2400 ರೂಪಾಯಿಯಂತೆ ಬಿಲ್ ಪಾವತಿಸಿ ಭೇಷ್ ಎನ್ನಿಸಿಕೊಂಡಿದ್ದಾರೆ. ಸೋಮವಾರವೇ ಕಬ್ಬಿನ ಹಂಗಾಮು ಮುಕ್ತಾಯಗೊಂಡಿದ್ದು ಅದೇ ದಿನ ರೈತರ ಬಿಲ್ ಪಾವತಿಸಲಾಗಿದೆ.
ರಾಜ್ಯದಲ್ಲಿಯೇ ಹಂಗಾಮು ಮುಗಿದ ದಿನವೇ ರೈತರಿಗೆ ಬಿಲ್ ಪಾವತಿ ಮಾಡಿದ ಉದಾಹರಣೆಗಳಿಲ್ಲ. ಅಂಥದರಲ್ಲಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮದ ಫಲವಾಗಿ ಸಕಾಲಕ್ಕೆ ಬಿಲ್ ಪಾವತಿಸಲಾಗಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ.
ಇಂಡಿ, ಸಿಂದಗಿ, ಚಡಚಣ ಭಾಗದ ರೈತರ ಆಸ್ತಿಯಾಗಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಎಷ್ಟು ಲಾಭವಾದರೂ ಅದನ್ನು ನೇರವಾಗಿ ರೈತರಿಗೆ ನೀಡುತ್ತೇವೆ. ರೈತರ ಶ್ರೇಯೋಭಿವೃಧ್ಧಿಗಾಗಿ ನಮ್ಮ ಕಾರ್ಖಾನೆ ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ನಮ್ಮ ಮೇಲೆ ನಂಬಿಕೆ ಇಟ್ಟು ಕಾರ್ಖಾನೆಗೆ ಕಬ್ಬು ಪೂರೈಸಿದ ಎಲ್ಲ ರೈತರಿಗೂ ಅಭಿನಂದಿಸುವುದಾಗಿ ಅವರು ತಿಳಿಸಿದ್ದಾರೆ.