ವಿಜಯಪುರ

ತಾಳಿಕೋಟೆಯಲ್ಲೊಂದು ವಿಲಕ್ಷಣ ಘಟನೆ, ಎಗ್‌ರೈಸ್‌ನಲ್ಲಿ ವಿಷ ಬೆರೆಸಿ ಮಗನನ್ನೇ ಕೊಂದ ತಂದೆ, ಕಾರಣ ಕೇಳಿದರೆ ಶಾಕ್ ಆಗ್ತೀರಾ..!

ಸರಕಾರ್ ನ್ಯೂಸ್ ವಿಜಯಪುರ

ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನಾ? ಎಂಬ ಬಲವಾದ ನಂಬಿಕೆಯಿಂದಲೇ ಬದುಕು ಸಾಗಿಸುವವರನ್ನು ಕಂಡಿದ್ದೇವೆ. ಆದರೆ, ಇಲ್ಲೊಬ್ಬ ತಂದೆ ಹುಟ್ಟಿಸಿದ ಮಗನನ್ನೇ ವಿಷ ಬೆರೆಯಿಸಿದ ಎಗ್‌ರೈಸ್ ತಿನ್ನಿಸಿದ ಅಮಾನವೀಯತೆ ಮೆರೆದಿದ್ದಾನೆ.

ತಾಳಿಕೋಟೆ ತಾಲೂಕಿನ ಗೋನಾಳ ಎಸ್ ಎಚ್ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ತಂದೆಯ ಕೃತ್ಯಕ್ಕೆ ಎಳೆಕಂದನೋರ್ವ ಬಲಿಯಾಗಿದ್ದರೆ ಇನ್ನೊಂದು ಮಗು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಪತಿಯ ಕೃತ್ಯಕ್ಕೆ ಮನನೊಂದ ಪತ್ನಿ ಇರುವ ಒಬ್ಬ ಮಗಳನ್ನಾದರೂ ಉಳಿಸಿಕೊಳ್ಳೋಣವೆಂದು ಹರಸಾಹಸ ಪಡುತ್ತಿದ್ದಾಳೆ.

ಅಂದಹಾಗೆ ಈ ಕೃತ್ಯ ಎಸಗಿದ ತಂದೆ ನಿಡಗುಂದಿ ತಾಲೂಕಿನ ಇಟಗಿ ಗ್ರಾಮದ ಚಂದ್ರಶೇಖರ ಶಿವಪ್ಪ ಅರಸನಾಳ (32) ಆಗಿದ್ದು, ಈತನ ಮಗ ಶಿವರಾಜ (2.5) ಅಸುನೀಗಿದ್ದಾನೆ. ಇನ್ನೋರ್ವ ಮಗಳು ರೇಣುಕಾ (5) ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಂದ್ರಶೇಖರನ ಮಡದಿ ಸಾವಿತ್ರಿ (25) ಪತಿಯ ವಿರುದ್ಧ ತಾಳಿಕೋಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆಗಿದ್ದೇನು ಗೊತ್ತಾ?

ಕಳೆದ ಎರಡು ತಿಂಗಳ ಹಿಂದೆ ಸಾವಿತ್ರಿ ಮಕ್ಕಳನ್ನು ಜೋಪಾನ ಮಾಡಲೆಂದು ತವರು ಮನೆಯಾದ ಗೋನಾಳ ಎಸ್ ಎಚ್ ಗ್ರಾಮದಲ್ಲಿ ಬಿಟ್ಟು ತಾನು ಪತಿ ಚಂದ್ರಶೇಖರ ಜೊತೆ ವಾಸವಿದ್ದಳು. ಈಚೆಗೆ ಚಂದ್ರಶೇಖರ ಮಾಡಿದ ಸಾಲ ತೀರಿಸಲು ಇರುವ ಜಮೀನು ಮಾರಲು ಒಪ್ಪಿಗೆ ಬೇಡಿ ಜಗಳ ತೆಗೆಯುತ್ತಿದ್ದನು. ಇದರಿಂದ ಬೇಸತ್ತ ಸಾವಿತ್ರಿ ಮಕ್ಕಳ ಬಳಿ ಬಂದು ವಾಸವಾಗಿದ್ದಳು. ಜೂ.2ರಂದು ಸಾವಿತ್ರಿ ಪತಿ ಚಂದ್ರಶೇಖರ ಹಾಗೂ ಭಾವಂದಿರಾದ ಬಸಪ್ಪ, ಗುಂಡಪ್ಪ, ಮೌನೇಶ ಹಾಗೂ ಹಣಮಂತ ಎಲ್ಲರೂ ಕೂಡಿ ಗೋನಾಳ ಎಸ್ ಎಚ್‌ಗೆ ಬಂದು ಆಸ್ತಿ ಮಾರಲು ಒಪ್ಪಿಗೆ ಕೇಳಿದ್ದಾರೆ. ಆಗ ಸಾವಿತ್ರಿ ಯಾವುದೇ ಕಾರಣಕ್ಕೂ ಆಸ್ತಿ ಮಾರುವುದಿಲ್ಲ, ಬೇಕಾದರೆ ಎಲ್ಲರೂ ದುಡಿದು ಸಾಲ ತೀರುಸುವುದಾಗಿ ಪ್ರತಿಕ್ರಿಯಿಸಿದ್ದಾಳೆ. ಅದೇ ದಿನ ಸಂಜೆ 4 ರ ಸುಮಾರಿಗೆ ಪತಿ ಚಂದ್ರಶೇಖರ ಹೊರಗಡೆಯಿಂದ ಎಗ್‌ರೈಸ್ ತಂದು ಅದರಲ್ಲಿ ವಿಷಯ ಬೆರೆಯಿಸಿ ಮಕ್ಕಳಿಗೆ ನೀಡಿದ್ದಾನೆ. ಸ್ವಲ್ಪ ಎಗ್‌ರೈಸ್ ತಿನ್ನುತ್ತಿದ್ದಂತೆ ಮಕ್ಕಳು ಸಂಕಟದಿಂದ ಹೊರಳಾಡತೊಡಗಿದ್ದು ಕೂಡಲೇ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಂತೆ ಮಗ ಶಿವರಾಜ ಅಸುನೀಗಿದ್ದಾನೆ. ಮಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರಕ್ಕೆ ಕರೆತರಲಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇಷ್ಟೆಲ್ಲಾ ನಡೆದ ಬಳಿಕ ಪತಿ ಚಂದ್ರಶೇಖರ ಸಾವಿತ್ರಿ ಬಳಿ ಬಂದು ‘ಸಾಲಕ್ಕೆ ಅಂಜಿ ನಾವೆಲ್ಲರೂ ಒಟ್ಟಿಗೆ ಸಾಯಲೆಂದು ಈ ಕತ್ಯ ಎಸಗಿದ್ದಾಗಿ’ ತಪ್ಪೊಪ್ಪಿಕೊಂಡಿದ್ದಾನೆ. ತಾಳಿಕೋಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

error: Content is protected !!