ಕರ್ನಾಟಕದ ಬೆಳವಣಿಗೆ ಬಿಜೆಪಿಗೆ ತಿರುಗುಬಾಣ? ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದ್ದೇನು? ಇಲ್ಲಿದೆ ನೋಡಿ ವಿವರ
ವಿಜಯಪುರ: ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿಗೆ ಮುಳುವಾಗಲಿವೆಯಾ? ಮುಂಬರುವ ವಿಧಾನ ಸಭೆ ಚುನಾವಣೆ ಮೇಲೆ ಕರಿನೆರಳು ಬೀಳಲಿದೆಯಾ? ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ ಬಿಚ್ಚಿಟ್ಟ ವಿವರ ಕುತೂಹಲ ಮೂಡಿಸುತ್ತಿದೆ.
ರಾಜ್ಯದಲ್ಲಿ ರಾಜ್ಯದಲ್ಲಿ ಎಲ್ಲವೂ ಅತಿರೇಕವಾಗಿದೆ. ಮತಗಳ ಆಸೆಗಾಗಿ ಬಿಜೆಪಿ ಒಂದಾದ ಮೇಲೆ ಒಂದು ವಿವಾದ ಮಾಡುತ್ತಿದೆ. ಹಿಜಾಬ್, ಕಾಶ್ಮೀರಿ ಫೈಲ್ಸ್ ವಿಚಾರ, ದೇವಸ್ಥಾನ, ಜಾತ್ರೆ ನಿರ್ಬಂಧ ವಿಚಾರ, ಹಲಾಲ್ , ಅಜಾನ್ ಹೀಗೆ ಹಲವು ವಿವಾದ ಹುಟ್ಟುಹಾಕಲಾಗುತ್ತಿದೆ. ಇದು ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಗುರುವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ಬಿಜೆಪಿ ಸರ್ಕಾರದ ಈ ನೀತಿಯಿಂದಾಗಿ ಕೈಗಾರಿಕೆಗಳು, ಕೈಗಾರಿಕಾ ಉದ್ಯಮಿಗಳು ರಾಜ್ಯಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಈ ಕಾರಣದಿಂದ ಕೈಗಾರಿಕೆಗಳು ಬೆಳೆವಣಿಗೆಯಾಗುವುದಿಲ್ಲ. ಕರ್ನಾಟಕ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಧಾರ್ಮಿಕ ವಿವಾದಗಳನ್ನು ಸಾಮರಸ್ಯದಿಂದ ಬಗೆ ಹರಿಸಬೇಕು ಬಿಜೆಪಿ ರಾಜಕೀಯ ‘ಟೂ ಮಚ್’ ಆಗಿದೆ ಎಂದರು.
ಬೆಂಗಳೂರಿನಲ್ಲಿ ಯುವಕನ ಕೊಲೆ ವಿಚಾರವಾಗಿ ಗೃಹ ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಯಾರೋ ನೀಡಿದ ಹೇಳಿಕೆಯನ್ನು ಅವರು ಹೇಳಿದ್ದಾರೆ. ನಮ್ಮ ನಾಡಿನಲ್ಲಿ ಸಂತರು ಮಹಾತ್ಮರು ನಡೆದಾಡಿದ್ದಾರೆ. ಇಂಥ ನಾಡಿನಲ್ಲಿ ಶಾಂತಿ ಕದಡಬಾರದು. ಇವೆಲ್ಲ ವಿವಾದಗಳ ಕುರಿತು ವಿಚಾರ ಮಾಡಬೇಕು. ಕೋಮು ಸೌಹಾರ್ದತೆ ಕೆಡಿಸುವ ಕೆಲಸ ಮಾಡಬಾರದು. ಬದುಕು ಕಟ್ಟುವ ಕೆಲಸವಾಗಬೇಕು ಎಂದರು.
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಸರ್ಕಾರದಲ್ಲಿ ಹಣವಿಲ್ಲ. ಹಸಿದವರಿಗೆ ಅನ್ನ ಇಲ್ಲ. ಇವೆಲ್ಲ ಸಮಸ್ಯೆಗಳನ್ನು ಮುಚ್ಚಿ ಹಾಕಲು ಇವೆಲ್ಲಾ ಮಾಡುತ್ತಿದ್ದಾರೆ ಎಂದು ಎಂ.ಬಿ. ಪಾಟೀಲ ಗಂಭೀರ ಆರೋಪ ಮಾಡಿದರು.
ದೇಶದಲ್ಲೂ ಆರ್ಥಿಕ ವ್ಯವಸ್ಥೆ ಕುಸಿದಿದ್ದು ಅತ್ತ ಗಮನ ಹರಿಸಬೇಕು. ಭಾರತ ಶ್ರೀಲಂಕಾ ಆಗಬಾರದು ಎಂದರು.
ಸಚಿವ ಸಂಪುಟ ವಿಚಾರ:
ಇನ್ನು ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದು ಅವರ ಆತಂಕರಿಕ ವಿಚಾರ. ರಾಜ್ಯದಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ. ಇವರು ಸಂಪುಟ ವಿಸ್ತರಣೆಗಾಗಿ ಓಡಾಡುತ್ತಿದ್ದಾರೆ. ಸರ್ಕಾರ ಸಾಲದ ಸುಳಿಯಲ್ಲಿದೆ. ಐದು ಲಕ್ಷ ಕೋಟಿ ರೂಪಾಯಿ ಸಾಲವಿದೆ. ಎಲ್ಲಾ ಇಲಾಖೆಯಲ್ಲೂ ಶೇಕಡಾ 40 ರಷ್ಟು ಹುದ್ದೆಗಳ್ು ಖಾಲಿ ಇವೆ. ಅವನ್ನು ಭರ್ತಿ ಮಾಡಿಲ್ಲ. ಇದೆಲ್ಲ ಬಿಟ್ಟು ಯಾವುದೇ ಅತಿರೇಕ ಮಾಡಿದರೆ ಜನರಿಗೆ ಗೊತ್ತಾಗುತ್ತದೆ. ಜನ ಬೇಸತ್ತಿದ್ದಾರೆ. ಮತಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ ಎಂದರು.
ಸರ್ಕಾರ ನಲವತ್ತು ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರರೇ ಹೇಳಿದ್ದಾರೆ. ಬಿಜೆಪಿಯವರು ರಾಜ್ಯ ಹಾಗೂ ದೇಶವನ್ನು ಹಾಳು ಮಾಡುತ್ತಿದ್ದಾರೆ. ನ ಖಾವೋಂಗಾ ನ ಖಾನೇದೋಂಗಾ ಎನ್ನುವ ಪ್ರಧಾನಿ ಮೌನವಾಗಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ. ಈ ಮೂಲಕ ರಾಜ್ಯದ ಭ್ರಷ್ಟಾಚಾರವನ್ನು ಪ್ರಧಾನಿ ಕಂಡೂ ಕಾಣದಂತೆ ನೋಡುತ್ತಿದ್ದಾರೆ. ಬೇರೆಯವರಾದರೆ ಸಿಬಿಐ ತನಿಖೆ ಮಾಡಿಸುತ್ತಾರೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನ ಪಡೆಯುತ್ತದೆ. ಬಿಜೆಪಿಯವರು ವಿವಾದಗಳನ್ನು ಮಾಡುತ್ತಿರೋದು ನಮಗೆ ಪ್ಲಶ್ ಪಾಯಿಂಟ್ ಆಗುತ್ತದೆ ಎಂದರು.