ವಿಜಯಪುರ

ಇಂಡಿ ತಾಲೂಕಿನ ಬೂದಿಹಾಳದಲ್ಲಿ ಕೈಗಾರಿಕೆ ವಸಾಹತು ಅಭಿವೃದ್ಧಿ, ಭೂ ಸ್ವಾಧೀನ ಪ್ರಕ್ರಿಯೆ ಯಾವಾಗ?

ವಿಜಯಪುರ: ಭೀಮಾತೀರ ಖ್ಯಾತಿಯ ಇಂಡಿ ತಾಲೂಕಿನ ಬಳ್ಳೊಳ್ಳಿ ಹೋಬಳಿಯ ಬೂದಿಹಾಳ ಗ್ರಾಮದಲ್ಲಿ ಕೈಗಾರಿಕೆ ವಸಾಹತು ಪ್ರಾರಂಭಿಸಲಾಗುತ್ತಿದ್ದು, ಶೀಘ್ರದಲ್ಲೇ ಭೂ ಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಬೂದಿಹಾಳ ಗ್ರಾಮದ ಸರ್ವೆ ನಂ. 65ರಲ್ಲಿ ಲಭ್ಯವಿರುವ ಒಟ್ಟು 25.14 ಎಕರೆ ಸರ್ಕಾರಿ ಜಮೀನಿನಲ್ಲಿ ಕೈಗಾರಿಕೆ ವಸಾಹತು ಅಭಿವೃದ್ಧಿ ಪಡಿಸಲು ಸರ್ಕಾರ ಆಸಕ್ತಿ ಹೊಂದಿದೆ. ಜಮೀನು ಭೂಸ್ವಾಧೀನ ಪಡಿಸಿಕೊಳ್ಳುವ ಮುನ್ನ ಈ ಪ್ರದೇಶದಲ್ಲಿ ಕೈಗಾರಿಕೆ ನಿವೇಶನಗಳಿಗೆ ಕೈಗಾರಿಕೋದ್ಯಮಿಗಳಿಂದ ಬೇಡಿಕೆ ಇರುವ ಬಗ್ಗೆ ವರದಿ ಪಡೆಯಲಾಗಿದೆ.
ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿ ಧಾರವಾಡ ಮತ್ತುಕಾಯಪಾಲಕ ಅಭಿಯಂತರ, ಬೆಳಗಾವಿ ಹಾಗೂ ವಿಜಯಪುರ ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರು 2020 ಸೆ. 30 ರಂದು ನೀಡಿದ ವರದಿಯಲ್ಲಿ ಇಂಡಿ ತಾಲೂಕಿನಲ್ಲಿ ಕೈಗಾರಿಕೆ ವಸಾಹತು ಇಲ್ಲದಿರುವ ಕಾರಣ ಈ ಪ್ರದೇಶದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವ ಕುರಿತು ಸುಮಾರು 96.05 ಎಕರೆ ಜಮೀನುಗಳಿಗೆ ಬೇಡಿಕೆ ಇರುವುದಾಗಿ ತಿಳಿಸಿದ್ದಾರೆ. ಈ ಸರ್ಕಾರಿ ಜಮೀನನ್ನು ಭೂ ಸ್ವಾಧೀನ ಪಡಿಸಿ ಕೈಗಾರಿಕೆ ಪ್ರದೇಶ ಸ್ಥಾಪಿಸುವುದು ಸೂಕ್ತ ಎಂದು ಅಭಿಪ್ರಾಯ ನೀಡಿದ್ದಾರೆ.
ಪ್ರಸ್ತಾವಿತ ಜಮೀನಿಗೆ ರಸ್ತೆ ಸಂಪರ್ಕ ಇರುವ ಬಗ್ಗೆ ಪರಿಶೀಲಿಸಿ ನಕ್ಷೆಯನ್ನು ಹಾಜರು ಪಡಿಸುವಂತೆ 2021 ಜು.31 ರಂದು ಧಾರವಾಡದ ವಿಶೇಷ ಭೂ ಸ್ವಾಧೀನಾಧಿಕಾರಿ ಸೂಚಿಸಿದ್ದು ಈ ಮಾಹಿತಿ ಸ್ವೀಕೃತವಾದ ನಂತರ ಭೂಸ್ವಾಧೀನ ಪ್ರಕ್ರಿಯೆಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್‌.ನಿರಾಣಿ ಅವರು ಶಾಸಕ ಯಶವಂತರಾಯಗೌಡ ಪಾಟೀಲ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

error: Content is protected !!