ಕುಂಭಕರ್ಣನ ನಿದ್ರೆಯಿಂದ ಎಚ್ಚೆತ್ತ ಕಾಂಗ್ರೆಸ್, ಬೆಲೆ ಏರಿಕೆ ವಿರುದ್ಧ ಬೃಹತ್ ಪ್ರತಿಭಟನೆ, ಚುನಾವಣೆ ಸಮೀಪಿಸುತ್ತಿದ್ದಂತೆ ಬೀದಿಗೆ ಬಂದ ಕೈ ನಾಯಕರು
ವಿಜಯಪುರ: ಇಂಧನ ದರ ಏರಿಕೆ, ಅಡುಗೆ ಅನಿಲ ದರ ಏರಿಕೆ, ಹಾಲು, ವಿದ್ಯುತ್ ಹೀಗೆ ಅಗತ್ಯ ವಸ್ತುಗಳ ಬೆಲೆ ದಿನೇ ದಿನೇ ಗಗನಕ್ಕೇರುತ್ತಲೇ ಇವೆ. ಇಷ್ಟು ದಿನಗಳ ಕಾಲ ಮುಗುಮ್ಮಾಗಿದ್ದ ಕಾಂಗ್ರೆಸ್ ಇದೀಗ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದೆ.
ಹೌದು, ಬೆಲೆ ಏರಿಕೆ ಇಂದು ನಿನ್ನೆಯದಲ್ಲ. ಕಳೆದ ಹಲವು ವರ್ಷಗಳಿಂದ ಬೆಲೆ ಏರಿಕೆಯಾಗುತ್ತಲೇ ಇದೆ. ಈವರೆಗೂ ಸುಮ್ಮನಿದ್ದ ಕಾಂಗ್ರೆಸ್ ಇದೀಗ ವಿಧಾನ ಸಭೆ ಚುನಾವಣೆಗೆ ಇನ್ನೊಂದು ವರ್ಷ ಮಾತ್ರ ಬಾಕಿ ಇರುವಾಗ ಜನರ ಪರ ಧ್ವನಿ ಎತ್ತಲು ಮುಂದಾಗಿರುವುದು ಹಾಸ್ಯಾಸ್ಪದ.
ಬೃಹತ್ ಹೋರಾಟ:
ಗುಮ್ಮಟ ನಗರಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ‘ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಬೆಲೆ ಏರಿಕೆ ವಿರುದ್ಧ ಶನಿವಾರ (ಏ.9) ಮಧ್ಯಾಹ್ನ 1ಕ್ಕೆ ಬೃಹತ್ ಹೋರಾಟ ಆಯೋಜಿಸಲಾಗಿದೆ. ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿ ಚೌಕ್ ಮಾರ್ಗವಾಗಿ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೆರಳಿ ಮನವಿ ಸಲ್ಲಿಸಲಾಗುವುದೆಂದು ಕಾಂಗ್ರೆಸ್ ಕಾರ್ಯಾಲಯ ಪ್ರಕಟಣೆ ಹೊರಡಿಸಿದೆ.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹಮ್ಮದ ಹ್ಯಾರಿಸ್ ನಲಪಾಡ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂಯುಕ್ತಾ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಜಯಪುರ ಜಿಲ್ಲಾ ಮೇಲುಸ್ತುವಾರಿಗಳಾದ ವಿನಯ ತಿಮ್ಮಾಪೂರ, ರಾಜ್ಯ ಯುವ ಕಾರ್ಯದರ್ಶಿಗಳಾದ ಮೊಯಿನ್ ಶೇಖ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಆರ್. ಆಲಗೂರ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ. ಆದರೆ, ಈವರೆಗೂ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಗೆ ಗಕನಕ್ಕೆ ಬಂದಿರಲಿಲ್ಲವೇ ಎಂದು ಸಾರ್ವಜನಿಕರು ಲೇವಡಿ ಮಾಡುತ್ತಿದ್ದಾರೆ.