ಎಐಡಿಎಸ್‌ಒ ನೇತೃತ್ವ ಬೃಹತ್ ಪ್ರತಿಭಟನೆ, ಹೆಚ್ಚುವರಿ ಶುಲ್ಕ ಸಂಗ್ರಹಕ್ಕೆ ವಿರೋಧ
ಸರಕಾರ ನ್ಯೂಸ್ ವಿಜಯಪುರ
ಹೆಚ್ಚುವರಿ ಶುಲ್ಕ ಸಂಗ್ರಹ ವಿರೋಧಿಸಿ ಮತ್ತು ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ವಿದ್ಯಾರ್ಥಿನಿಯರು ಎಐಡಿಎಸ್‌ಒ ನೇತೃತ್ವ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಲು ಆಗ್ರಹಿಸಿ ನೂರಾರು ವಿದ್ಯಾರ್ಥಿನಿಯರು ಬುಧವಾರ ಪ್ರತಿಭಟನೆ ನಡೆಸಿದರು. ನಗರದ ಮಹಾತ್ಮ ಗಾಂಧಿ, ಬಸವೇಶ್ವರ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಡಳಿತ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಬಳಿಕ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ರಾಜ್ಯ ಸಕ್ರೆಟರಿಯೇಟ್ ಸದಸ್ಯೆ ಸ್ನೇಹಾ ಕಟ್ಟಿಮನಿ ಮಾತನಾಡಿ, ಬಾಲಕಿಯ ಸರ್ಕಾರಿ ಪಪೂ ಕಾಲೇಜಿನಲ್ಲಿ 1000 ರೂ. ಶುಲ್ಕ ಹೆಚ್ಚಿಸಿದ್ದಾರೆ. ಕಳೆದ ವರ್ಷವೂ ಕಾಲೇಜು ಕಟ್ಟಡದ ಹೆಸರಿನಲ್ಲಿ 1000 ರೂ. ಹೆಚ್ಚುವರಿ ಹಣ ಸಂಗ್ರಹಿಸಿದ್ದಾರೆ. ಹಾಗೆಯೇ ಈ ವರ್ಷ ಮತ್ತೆ 1000 ರೂ.ಹೆಚ್ಚಿಗೆ ಹಣ ಸಂಗ್ರಹಿಸುತ್ತಿದ್ದಾರೆ. ಸರ್ಕಾರಿ ಕಾಲೇಜು ಕಟ್ಟಡಕ್ಕೆ ಸರ್ಕಾರದಿಂದ ಹಣ ವಿನಿಯೋಗಿಸಬೇಕೆ ಹೊರತು ವಿದ್ಯಾರ್ಥಿಗಳಿಂದಲ್ಲ. ಈ ವಿದ್ಯಾರ್ಥಿ ವಿರೋಧಿ ಧೋರಣೆ ಕೈ ಬಿಡಬೇಕು ಎಂದರು.
ಈಗಾಗಲೇ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಹಣವನ್ನು ವಾಪಸ್ಸು ನೀಡಬೇಕು. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2800 ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಸರಿಯಾದ ಶೌಚಗೃಹ ವ್ಯವಸ್ಥೆ ಇಲ್ಲ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿನಿಯರಿಗೆ ಬಸ್ ಸೌಕರ್ಯವಿಲ್ಲ. ಶಿಕ್ಷಕರ ಕೊರತೆ ಇದೆ. ಹೀಗಾಗಿ ತುರ್ತಾಗಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾಧ್ಯಕ್ಷೆ ಸುರೇಖಾ ಕಡಪಟ್ಟಿ, ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ದೀಪಾ ವಡ್ಡರ, ವಿದ್ಯಾರ್ಥಿನಿಯರಾದ ಆರತಿ ರಾಠೋಡ, ನೀಲಮ್ಮ ಗುಳೇದ ಮತ್ತಿತರರಿದ್ದರು.