ವಿಜಯಪುರ

ಕಾಖಂಡಕಿ ಕಾರಹುಣ್ಣಿಮೆ ಪ್ರಕರಣ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆಯಡಿ ದೂರು ದಾಖಲು

ಸರಕಾರ ನ್ಯೂಸ್ ಬಬಲೇಶ್ವರ

ಸುಪ್ರಸಿದ್ಧ ಕಾಖಂಡಕಿ ಕಾರಹುಣ್ಣಿಮೆ ಹಿನ್ನೆಲೆ ಎತ್ತುಗಳನ್ನು ಓಡಿಸುವ, ಬೆದರಿಸುವ ಮೂಲಕ ಕರಿ ಹರಿಯುವ ಸಂಪ್ರದಾಯದ ಆಚರಣೆ ವೇಳೆ ಎತ್ತುಗಳ ಇರಿತದಿಂದ ಗಾಯಗೊಂಡಿರುವ ಗಾಯಾಳುಗಳು ಇದೀಗ ಚೇತರಿಸಿಕೊಂಡಿದ್ದು, ಎತ್ತುಗಳ ಮಾಲೀಕರ ಮೇಲೆ ಪ್ರಾಣಿಗಳ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಜೂ.10 ರಂದು ಕಾಖಂಡಕಿಯಲ್ಲಿ ಕಾರಹುಣ್ಣಿಮೆ ಆಚರಣೆ ವೇಳೆ ಎಂಟು ಜನ ಗಾಯಗೊಂಡಿದ್ದರು. ಕಾಖಂಡಕಿಯ ಅಗಸಿಯಲ್ಲಿ ನಿಂತಿದ್ದ 8 ಜನರ ಮೇಲೆ ಏಕಾಏಕಿ ಎತ್ತುಗಳು ನುಗ್ಗಿದ್ದವು. ಎತ್ತುಗಳನ್ನು ನಿಯಂತ್ರಿಸಲು ನಿಂತಿದ್ದ 4-5ಯುವಕರ ಗುಂಪು ಎತ್ತುಗಳು ಬಂದ ಕೂಡಲೇ ನಿಯಂತ್ರಿಸದೆ ಜನರ ಮೇಲೆ ನುಗ್ಗಿಸುತ್ತಿದ್ದರು. ಅಲ್ಲದೇ ಅವುಗಳನ್ನು ತಿವಿದು ರೊಚ್ಚಿಗೆಬ್ಬಿಸುತ್ತಿದ್ದರು. ಆ ಎತ್ತುಗಳು ಜನರತ್ತ ನುಗ್ಗಿ ಜನರನ್ನು ತಿವಿದು ಗಾಯಗೊಳಿಸುತ್ತಿದ್ದವು. ಆ ಸಂದರ್ಭ ಹಾಗೆ ಬಂದ ಎತ್ತು ಎಂಟು ಜನರ ಮೇಲೆ ನುಗ್ಗಿ ತಿವಿದಿತ್ತು.

ಮುತ್ತಗಿಯ ಸಿದ್ದನಗೌಡ ಪಾಟೀಲ, ಕಾಖಂಡಕಿಯ ಬಸಪ್ಪ ಓಡಗಲ್ಲ, ಶರಣಪ್ಪ ಸಿದರಡ್ಡಿ, ತುಕಾರಾಮ ಕೊಂತಿಕಲ್ಲ, ಸಾವಳಗಿಯ ಮಲ್ಲಪ್ಪ ನಾಂದ್ರೆಕರ, ಕಾಖಂಡಕಿಯ ಬಾಗಪ್ಪ ಬೆಳ್ಳುಬ್ಬಿ, ದಸ್ತಗೀರ ಸಿದರೆಡ್ಡಿ ಹಾಗೂ ಬಿದರಿ ಗ್ರಾಮದ ಚನ್ನಪ್ಪ ಮದನಶೆಟ್ಟಿ ಗಾಯಗೊಂಡಿದ್ದರು. ಕೂಡಲೇ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಬಬಲೇಶ್ವರ ಠಾಣೆಯಲ್ಲಿ 2023 ಜೂ.23ರಂದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

error: Content is protected !!