ಮಾಳಿ-ಮಾಲಗಾರ ಸಮಾಜದ ಅಭಿವೃದ್ಧಿ, ಪ್ರತ್ಯೇಕ ನಿಗಮನಕ್ಕೆ ಬೇಡಿಕೆ, ಶಾಸಕ ಯಶವಂತರಾಯಗೌಡ ಪ್ರಶ್ನೆಗೆ ಸಿಕ್ಕ ಉತ್ತರ ಇಲ್ಲಿದೆ ನೋಡಿ….
ಬೆಂಗಳೂರ: ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಮಾಳಿ-ಮಾಲಗಾರ ಸಮಾಜದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವ ವಿಷಯವಾಗಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರದ ಗಮನ ಸೆಳೆದಿದ್ದಾರೆ.
ಬುಧವಾರ ವಿಧಾನ ಮಂಡಲ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಮಾಳಿ-ಮಾಲಗಾರ ಸಮುದಾಯದ ಸದ್ಯದ ಸ್ಥಿತಿಗತಿ ಹಾಗೂ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಮನವರಿಕೆ ಮಾಡಲೆತ್ನಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 25-30 ಲಕ್ಷ ಜನಸಂಖ್ಯೆ ಹೊಂದಿರುವ ಹಾಗೂ ಕೃಷಿ ಮತ್ತು ತೋಟಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಾಳಿ-ಮಾಲಗಾರ ಸಮುದಾಯ ಹಿಂದುಳಿದ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಪ್ರವರ್ಗ -2ಎ ನಲ್ಲಿಯ ಕ್ರಮ ಸಂಖ್ಯೆ 40 (ಡಿ)ನಲ್ಲಿ ಮಾಲಗಾರ ಹಾಗೂ (ಈ)ನಲ್ಲಿ ಮಾಳಿ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-3ಬಿಗೆ ಸೇರಿದಂತೆ ಹಿಂದುಳಿದ ವರ್ಗಗಳ ಆರ್ಥಿಕಾಭಿವೃದ್ಧಿಗಾಗಿ ವ್ಯಾಪಾರ, ಸಾರಿಗೆ, ಸೇವಾ ವಲಯ ಮುಂತಾದ ಉದ್ದೇಶಗಳಿಗಾಗಿ ಸ್ವಯಂ ಉದ್ಯೋಗ ಸಾಲ ಯೋಜನೆ, ಸಣ್ಣ ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಗಂಗಾ ಕಲ್ಯಾಣ ನೀರಾವರಿ ಯೋಜನೆ, ವಿದ್ಯಾರ್ಥಿಗಳಿಗೆ ಹಣಕಾಸಿನ ಕೊರತೆಯಿಂದ ಅರ್ಧದಲ್ಲಿಯೇ ವ್ಯಾಸಂಗ ನಿಲ್ಲಿಸುವುದನ್ನು ತಡೆಗಟ್ಟಲು ಅರಿವು ಶೈಕ್ಷಣಿಕ ಸಾಲ ಯೋಜನೆ, ಸಾಂಪ್ರಾದಾಯಿಕ ವೃತ್ತಿದಾರರ ಸಾಲ, ಸ್ವಸಹಾಯ ಸಂಘಗಳ ಮೂಲಕ ಕಿರುಸಾಲ ಯೋಜನೆಗಳನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ನೀಡಲಾಗುತ್ತಿದೆ. ಹೀಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮದ ಅವಶ್ಯಕತೆ ಉದ್ಭವಿಸುವುದಿಲ್ಲವೆಂದು ತಿಳಿಸಿದ್ದಾರೆ.