ರಾಜ್ಯ

ಮದ್ಯ ಮಾರಾಟಗಾರರಿಂದ ಖಡಕ್ ಸಂದೇಶ, ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ, ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಎಚ್ಚರಿಕೆ

ಸರಕಾರ್ ನ್ಯೂಸ್ ವಿಜಯಪುರ

ಸಾಲು ಸಾಲು ಮನವಿ, ಪ್ರತಿಭಟನೆಗಳಿಗೂ ಜಗ್ಗದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಮದ್ಯ ಮಾರಾಟಗಾರರು ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳುವ ತೀರ್ಮಾನ ಪ್ರಕಟಿಸಿದ್ದಾರೆ.

ಅಬಕಾರಿ ಉದ್ಯಮಿಗಳ ಬೇಡಿಕೆ ಈಡೇರಿಸದ ಸರ್ಕಾರದ ವಿರುದ್ದ ಆಗಸ್ಟ್‌ನಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಆ ಹಿನ್ನೆಲೆ ರಾಜ್ಯಾದ್ಯಂತ ವಿಭಾಗವಾರು ಸನ್ನದುದಾರರ ಸಭೆ ನಡೆಸುತ್ತಿರುವುದಾಗಿ ಕರ್ನಾಟಕ ಫೆಡರೇಷನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಗುರುಸ್ವಾಮಿ ತಿಳಿಸಿದ್ದಾರೆ.

ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಕೆಲವು ದಿನಗಳ ಹಿಂದೆ ಮದ್ಯ ಮಾರಾಟಗಾರರು ಹೋರಾಟಕ್ಕೆ ಮುಂದಾದಾಗ ಅಬಕಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಶೀಘ್ರದಲ್ಲೇ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಈವರೆಗೂ ಬೇಡಿಕೆ ಈಡೇರಿಲ್ಲ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಅಬಕಾರಿ ಅಧಿಕಾರಿಗಳಿಂದ ಉದ್ದಿಮೆದಾರರು ನಿರಂತರ ಶೋಷಣೆಗೆ ಒಳಗಾಗುತ್ತಿದ್ದಾರೆ. ಇನ್ನೊಂದೆಡೆ ಅಕ್ರಮ ಮದ್ಯ ಮಾರಾಟ ಹಾವಳಿ ಹೆಚ್ಚಾಗುತ್ತಿದೆ. ಇದರಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರೇ ಶಾಮೀಲಾಗಿದ್ದಾರೆಂದು ಅವರು ಆರೋಪಿಸಿದರು.

ಸರ್ಕಾರ ಏಪ್ರೀಲ್‌ನಿಂದ ಇ- ಇಂಡೆಂಟಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದಾಗ ಸಾಫ್ಟವೇರ್ ಸರಿಪರಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಸರ್ವರ್ ಸಮಸ್ಯೆಯಿಂದಾಗಿ ಇಂಡೆಂಟ್ ಹಾಕಲಾಗುತ್ತಿಲ್ಲ. ಇದರಿಂದ ಮದ್ಯಖರೀದಿಯಲ್ಲಿ ಸಾಕಷ್ಟು ಸಮಸ್ಯೆಯಾಗಿದೆ. ಕೂಡಲೇ ಸರಿಪಡಿಸದೇ ಹೋದರೆ ವ್ಯಾಪಾರ ಸ್ಥಗಿತಗೊಳಿಸುವುದಾಗಿ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಮಾತನಾಡಿ, ರಾಜ್ಯದಲ್ಲಿ ಸುಮಾರು 11 ಸಾವಿರ ಪರವಾನಿಗೆ ದಾರರು ಇದ್ದಾರೆ. ಇವರನ್ನು ಅವಲಂಬಿಸಿ ಅನೇಕ ಉದ್ಯಮಿಗಳು ಹಾಗೂ ವ್ಯಾಪಾರಸ್ಥರು ಬದುಕು ಸಾಗಿಸುತ್ತಿದ್ದಾರೆ. ಆದರೆ, ಈ ಪರವಾನಿಗೆದಾರರ ಬೇಡಿಕೆ ಈಡೇರಿಸದೇ ಇರುವುದರಿಂದ ಉದ್ಯಮ ಅವನತಿಯತ್ತ ಸಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಮುಖ್ಯಮಂತ್ರಿ ಗಳಿಗೆ ಮನವಿ ಕೊಡುತ್ತಲೇ ಇದ್ದೇವೆ. ಕಳೆದ ವರ್ಷ ಆಶ್ವಾಸನೆ ಕೊಟ್ಟಿದ್ದರು. ಈವರೆಗೂ ಆ ಬೇಡಿಕೆ ಈಡೇರಿಲ್ಲ ಎಂದರು.

ಹೋರಾಟದ ಅಂಗವಾಗಿ ವಿಭಾಗೀಯವಾರು ಸಭೆ ನಡೆಸಲಾಗುತ್ತಿದೆ. ಈಗಾಗಲೇ ಹೊಸಪೇಟೆಯಲ್ಲಿ ಸಭೆ ಆಗಿದ್ದು, ಇದೀಗ ವಿಜಯಪುರದಲ್ಲಿ ಸಭೆ ಕರೆಯಲಾಗಿದೆ. ಮುಂದಿನ ಸಭೆ ಕಲಬುರಗಿಯಲ್ಲಿ ನಡೆಯಲಿದೆ. ‘ಅಬಕಾರಿ ಉದ್ಯಮ ಉಳಿಸಿ’ ಎಂಬ ಅಭಿಯಾನ ಕೈಗೊಳ್ಳಲಾಗಿದೆ ಎಂದರು.
ಜಿಲ್ಲಾಧ್ಯಕ್ಷ ಪ್ರಕಾಶ ಶೆಟ್ಟಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಬಾಬು ರೆಡ್ಡಿ ಮತ್ತಿತರರು ಇದ್ದರು.

error: Content is protected !!