ಇಂಡಿ ಟು ಚಡಚಣ…..ಹೀಗೊಂದು ಅಪರೂಪದ ಪ್ರೇಮ ಕಥನ….ಓದಲು ಮರೆಯದಿರಿ…!
ಮೊನ್ನೆ… ಮೊನ್ನೆ ಇಂಡಿಗೆ ಹೋಗಿದ್ದೆ. ಮೊದಲಿದ್ದ ಇಂಡಿ ಈಗಿಲ್ಲ. ತುಂಬ ಬದಲಾಗಿದೆ. ಆ ದೊಡ್ಡ ಹುಣಸೆ ಮರ, ಹರಕು ತಟ್ಟಿನ ಚಹಾದ ಅಂಗಡಿಗಳು, ಸಿಮೇಂಟಿನ ಬೆಂಚ್ ಗಳು, ನಂದಿನ ಹಾಲಿನ ಅಂಗಡಿ, ಕಂಟ್ರೋಲರ್ ರೂಂ, ಟ್ಯಾಕ್ಸಿ ಸ್ಟ್ಯಾಂಡ್, ಬಾಳೆಹಣ್ಣಿನ ತಳ್ಳುಗಾಡಿಗಳು….ಇದ್ಯಾವುದೂ ಈಗಿಲ್ಲ. ಬೇಕಾಬಿಟ್ಟಿಯಾಗಿ ನಿಲ್ಲುವ ಬಸ್ ಗಳು, ಸೀಟ್ ಹಿಡಿಯಲು ಓಡಾಡುವ ಪಡ್ಡೇ ಹೈಕಳು, ಬುತ್ತಿ ತೆಗೆದುಕೊಳ್ಳಲು ಬರುವ ಕಾಲೇಜ್ ಹುಡುಗರು ಮೊದಲಿನಂತೆ ಕಾಣಿಸಲಿಲ್ಲ. ಬಿಸಿಲು ಮಾತ್ರ ಮೊದಲಿನದಕ್ಕಿಂತಲೂ ಸ್ವಲ್ಪ ಹೆಚ್ಚೇ ಅನ್ನಿಸಿತು. ಹಳೇ ಕಂಪೌಂಡ್ ಜಾಗದಲ್ಲಿ ಅಂದರೆ ಆ ಕಡೆ ದೊಡ್ಡ ಹುಣಸೆಮರ ಇತ್ತಲ್ಲ ಅದೀಗಿಲ್ಲ. ಆ ಜಾಗದಲ್ಲೀಗ ಪೇಪರ್ ಸ್ಟಾಲ್ ಇದೆ. ಅಲ್ಲೇ ನಿಂತಿದ್ದೆ. ನೆರಳು ಆಶ್ರಯಿಸಿ. ಸರಿಯಾಗಿ ನಾ ನಿಂತಿದ್ದ ಜಾಗಕ್ಕೆ ಬರಬೇಕಾ… ಆ ಕೆಂಪು ಬಸ್. ಇನ್ನೇನು ಬರ್… ಅಂತಾ ಮೈ ಮೇಲೆ ಬಂದಂತೆ ಅನ್ನಿಸಿ ದೂರಕ್ಕೆ ಸರಿದು ನಿಂತು ಡ್ರೈವರ್ ನತ್ತ ದಿಟ್ಟಿಸಿ ನೋಡಿದೆ. ಮುಖ ಸರಿಯಾಗಿ ಕಾಣಲಿಲ್ಲ. ಕಂಡಿದ್ದರೆ ನಿಂತಲ್ಲಿಂದಲೇ ಜಾಡಿಸಬೇಕು ಅಂತಿದ್ದೆ. ಹೋಗಲಿ ಬಿಡು ಅಂತಾ ದೃಷ್ಟಿ ಬದಲಿಸುವುದರೊಳಗೆ ರಪ್ಪ ಅಂತಾ ಕಣ್ಣಿಗೆ ರಾಚಿದ್ದು ಆ ಕಪ್ಪು ಬೀಳುಪಿನ ಬೋರ್ಡ್. ಅದನ್ನು ನೋಡಿದ್ದೇ ತಡ ಕೋಪ, ತಾಪವೆಲ್ಲ ಕಳೆದು ಮನಸ್ಸಲ್ಲೇನೋ ಆಹ್ಲಾದಕರ ಅನುಭವ. ಯಾವುದು ಆ ಬೋರ್ಡ್ ಗೊತ್ತಾ….? ಅದೇ “ಇಂಡಿ ಟು ಚಡಚಣ”. ಹೌದು ಅದೇ ಬಸ್….ಅದೇ ಬೋರ್ಡ್….ಇನ್ನೂ ಇದೆಯಾ? ಈ ಬಸ್ ಅಂತಾ ಎಷ್ಟೊಂದು ಆಶ್ಚರ್ಯ ಆಯ್ತು ಗೊತ್ತಾ? ಅರೆ ಒಂದು ಕ್ಷಣ ನಂಬಲಿಕ್ಕೇ ಆಗಲಿಲ್ಲ. ಮತ್ತೆ ಮತ್ತೆ ಆ ಬೋರ್ಡ್ ನೋಡುತ್ತಲೇ ನಿಂತಿದ್ದೆ ಸುಡುವ ಬಿಸಿಲು ಲೆಕ್ಕಿಸದೆ. ಮನಸ್ಸು ಬರೋಬ್ಬರಿ ಹತ್ತು ವರ್ಷದ ಹಿಂದಕ್ಕೆ ಜಾರಿತ್ತು.
ಹೌದು, ಆವೊತ್ತು ಇದ್ದದ್ದು ಇದೇ ಕೆಂಪು ಬಸ್. ಎಂದಿನಂತೆ ಕಾಲೇಜ್ ಮುಗಿಸಿ ಬುತ್ತಿ ತೆಗೆದುಕೊಂಡು ರೂಮಿಗೆ ಹೋಗೋಣ ಅಂತ ಬಸ್ ಸ್ಟ್ಯಾಂಡಿಗೆ ಬಂದಿದ್ದೆ. ಬಾರಾ(ಹನ್ನೆರೆಡು ಗಂಟೆ) ಬಸ್ ಇನ್ನೂ ಬರೋದು ತಡ ಇತ್ತು. ಅಲ್ಲೇ ಹುಣಸೆ ಮರದ ನೆರಳಿಗೆ ಆನಿಸಿ ಪೇಪರ್ ಓದುತ್ತಾ ನಿಂತಾಗ ಯಲ್ಲಾಲಿಂಗ ಓಡೋಡಿ ಬಂದವನೇ ಅಣ್ಣಾ ಅಲ್ನೋಡು ಯಾರು ಬರ್ತಾ ಇದ್ದಾರೆ ಅಂತ ಆ ದೊಡ್ಡ ಗೇಟ್ ನತ್ತ ತೋರು ಬೆರಳು ಚಾಚಿದ್ದ. ಆ ಬಿರು ಬಿಸಿಲಲ್ಲಿ ಬಿಳಿ ಬಣ್ಣದ ಹೂವಿನ ಚೂಡಿದಾರ, ಅದರ ಮೇಲೆ ತಿಳಿ ನೀಲಿ ದುಪ್ಪಟ ಧರಿಸಿ ಕೈಯಲ್ಲಿ ಅದೇ ನೀಲಿ ಬಣ್ಣದ ಬ್ಯಾಗ್ ಹಿಡಿದು ನೀನು ಪುಟ್ಟ ಪುಟ್ಟ ಹೆಜ್ಜೆ ಹಾಕಿ ಬರುತ್ತಿದ್ದರೆ ತಿಳಿ ನೀಲಿ ಸರೋವರದ ಮೇಲೆ ಹಂಸ ತೇಲಿ ಬಂದಂತಿತ್ತು. ನಿನ್ನೆಲ್ಲ ಮಾಹಿತಿ ತಿಳಿದುಕೊಂಡೇ ವರದಿ ಒಪ್ಪಿಸಲು ಬಂದಿದ್ದ ಅಂತಾ ಕಾಣಿಸುತ್ತೆ ಯಲ್ಲಾಲಿಂಗ. ಬಂದವನೇ ಅಣ್ಣಾ…ಚಡಚಣಕ್ಕ ಹೊರಟಾರಂತ ನೀನು ಹೋಗತೇನ್ ನೋಡು ಅಂದವನೇ ತಾನೇ ಮೊದಲು ಹೋಗಿ ಸೀಟು ಹಿಡಿದು ನಿನ್ನ ಪಕ್ಕದಲ್ಲಿ ನನಗೋಸ್ಕರ ಸೀಟ್ ರಿಸರ್ವ ಇರಿಸಿದ್ದು ಬಹುಶ ನೀನು ಗಮನಿಸಲಿಕ್ಕಿಲ್ಲ ಅಲ್ಲಾ….? ಇನ್ನೇನು ಬಸ್ ಹೊರಡಲಿದೆ ಎಂದಾಗ ಓಡೋಡಿ ಬಂದು ಹಿಂದಿನ ಬಾಗಿಲಿನಿಂದ ಹತ್ತಿ ನಾ ನಿನ್ನ ಪಕ್ಕದಲ್ಲಿ ಕುಳಿತಾಗ ಕಂಡ ಆ ನಿನ್ನ ಗಾಬರಿ ಮಿಶ್ರಿತ ಮುಖ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಒಳಗೊಳಗೆ ಖುಷಿ ಪಡುತ್ತಲೇ ಹೊರಗಡೆ ಆತಂಕ ವ್ಯಕ್ತಪಡಿಸುತ್ತಿದ್ದ ನಿನ್ನನ್ನು ಬಸ್ ನಲ್ಲಿದ್ದವರೆಲ್ಲರೂ ಬಿಟ್ಟು ಬಿಡದೆ ನೋಡುತ್ತಿದ್ದರು. ಅವರ ನೋಟ ಎದುರಿಸಲಾಗದೆ ಮುಖದ ತುಂಬ ದುಪ್ಪಟ ಹೊದ್ದುಕೊಂಡು ನನ್ನ ತೊಡೆಯ ಮೇಲೆ ಮಲಗಿದ ಆ ಘಳಿಗೆ ಮರೆಯಲಸಾಧ್ಯ. “ಯಾರಾದರೂ ನೋಡ್ತಾರೆ ಇಳಿಯೋ…” ಎಂದು ನೀನು ಬಲವಂತ ಮಾಡಿದಷ್ಟು ಬಸ್ ವೇಗ ಪಡೆದುಕೊಳ್ಳುತ್ತಿತ್ತು. ನಿನಗಿದ್ದ ನಿನ್ನ ಅಣ್ಣನ ಭಯ ನನಗೂ ಅರ್ಥವಾಗುತ್ತಿತ್ತು. ಆದರೆ ಹೀಗೆ ಒಂಟಿಯಾಗಿ ಊರಿಗೆ ಹೊರಟಿದ್ದ ನಿನ್ನನ್ನು ಬಿಟ್ಟರೆ ನನ್ನಂಥ ಮೂರ್ಖ ಯಾರೂ ಇಲ್ಲ ಅಂತ ಯಲ್ಲಾಲಿಂಗ ಮೊದಲೇ ನನ್ನನ್ನು ಎಚ್ಚರಿಸಿದ್ದ. ಅದೇ ಧೈರ್ಯ ಕೊಂಚ ಕೆಲಸ ಮಾಡಿತ್ತು. ಅವನ ಸಹಕಾರಕ್ಕೆ ಮನಸ್ಸೂ ಒಳಗೊಳಗೆ ಹ್ಯಾಟ್ಸಾಪ್ ಹೇಳುತ್ತಿತ್ತು. ಬಸ್ ಊರು ದಾಟಿದ್ದೇ ತಡ ಮುಖದ ಮೇಲಿನ ದುಪ್ಪಟ್ಟ ಸರಿಸಿ ಮೇಲೆದ್ದು ಭುಜಕ್ಕೆ ಭುಜ ಅಂಟಿಸಿ ತಲೆಗೆ ತಲೆಯಾನಿಸಿ ಕುಳಿತ ಆ ನಿನ್ನ ಧೈರ್ಯ ಕಂಡಾಗ ನಾನೇ ಅಧೈರ್ಯನಾಗಿದ್ದೆ. ಬಸ್ಸನಲ್ಲಿದ್ದವರೆಲ್ಲ ನಮ್ಮನ್ನೇ ನೋಡುತ್ತಿದ್ದಾರೆಂಬ ಖಬರು ಇಲ್ಲದಂತೆ ನಿನ್ನ ಮಾತು ಆಲಿಸಿತ್ತಲ್ಲೇ ಇದ್ದವನಿಗೆ ಕಂಡೆಕ್ಟರ್ ಬಂದು ಟಿಕೆಟ್ ಕೇಳಿದಾಗಲೇ ಮೈ ಕೊಡವಿಕೊಂಡು ತಲೆ ಎತ್ತಿದ್ದು. ನನ್ನನ್ನೊಮ್ಮೆ…..ನಿನ್ನನ್ನೊಮ್ಮೆ ದಿಟ್ಟಿಸಿ ನೋಡಿ ಟಿಕೆಟ್ ಕತ್ತರಿಸಿ ಕೊಟ್ಟ ಕಂಡೆಕ್ಟರ್ ಚಿಲ್ರೆ ಇಲ್ಲ ಆಮೇಲೆ ತಗೊಳ್ಳಿ ಅಂತಾ ಜಾಗ ಖಾಲಿ ಮಾಡುತ್ತಿದ್ದಂತೆ ಮತ್ತದೇ ಭಂಗಿಯಲ್ಲಿ ನನ್ನ ಭುಜಕ್ಕೆ ನೀನು ತಲೆಯಾನಿಸಿದಾಗ ನನಗೋ… ಸ್ವರ್ಗವೇ ಹೆಗಲ ಮೇಲಿರಿಸಿಕೊಂಡ ಅನುಭವ. ಸುಮಾರು ಒಂದೂವರೆ ಘಂಟೆ ಪ್ರಯಾಣದಲ್ಲಿ ನಿನ್ನ ವ್ಯಾನಿಟಿ ಬ್ಯಾಗ್ ಚೆಕ್ ಮಾಡಿದ್ದು, ಅದರಲ್ಲಿದ್ದ ಫೋಟೋ ಕದ್ದಿದ್ದು, ಮೊದಲೇ ಬರೆದಿಟ್ಟಿದ್ದ ಲವ್ ಲೆಟರ್ ನಿನಗೇ ಗೊತ್ತಿಲ್ಲದಂತೆ ಬ್ಯಾಗ್ ನಲ್ಲಿರಿಸಿದ್ದು ಬಹುಶಃ ಬಸ್ ನಲ್ಲಿದ್ದ ಯಾರೂ ಗಮನಿಸಲಿಕ್ಕಿಲ್ಲ. ನಮ್ಮಿಬ್ಬರ ಆ ಪಿಸುಮಾತುಗಳು ಮುಗಿಯುವ ಮುನ್ನವೇ ಚಡಚಣ ಬಂತು ಇಳೀರಿ ಎಂದ ಆ ಕಂಡೆಕ್ಟರ್ ಧ್ವನಿ ಅಕ್ಷರಶಃ ಯಮಕಿಂಕರನ ಎಚ್ಚರಿಕೆ ಗಂಟೆಯಂತಿತ್ತು. ಅಲ್ಲಿಂದ ನಿನಗೆ ಬೀಗರ ಊರಿಗೆ ಬೀಳ್ಕೊಟ್ಟು ನಾನು ಮತ್ತದೇ ಬಸ್ ಹಿಡಿದು ವಾಪಸ್ ಇಂಡಿಗೆ ಬರುವತನಕ ನರಕಯಾತನೆ. ನೀನು ಜೊತೆಗಿದ್ದಾಗ ಕ್ಷಣದಂತೆ ಕಳೆದು ಹೋದ ಸಮಯ ನೀನಿಲ್ಲದೇ ಇಂಡಿ ತಲುಪಲು ಯುಗಗಳೇ ಕಳೆದಂತೆ ಭಾಸವಾಗುತ್ತಿತ್ತು. ಸಂಜೆ ಬಸ್ ಮೊದಲಿದ್ದ ಸ್ಥಳಕ್ಕೆ ತಲುಪಿತ್ತಿದ್ದಂತೆ ಯಲ್ಲಾಲಿಂಗ ನನಗೋಸ್ಕರ ಕಾಯುತ್ತಿದ್ದ ಎಂಬುದು ಬಹುಶಃ ನಿನಗೆ ಗೊತ್ತಿರಲಿಕ್ಕಿಲ್ಲ. ಅವನಾಗ ಮಾಡಿದ ಉಪಕಾರಕ್ಕೆ ಮುಂದೆ ಎಷ್ಟೋ ಸಲ ನಾವು ಫೋನ್ ನಲ್ಲಿ ಮಾತನಾಡುವಾಗ ಪರಸ್ಪರ ಕೃತಜ್ಞತೆ ಸಲ್ಲಿಸಿದ್ದು ಯಲ್ಲಾಲಿಂಗನೂ ಕೇಳಿಸಿಕೊಳ್ಳಲಿಕ್ಕಿಲ್ಲ. ಅದೇನೇ ಇರಲಿ ಈವೊತ್ತು ಈ ಸುಡುಬಿಸಿಲಲ್ಲಿ…..ಅದೇ ಜಾಗದಲ್ಲಿ, ಅದೇ “ಇಂಡಿ ಟು ಚಡಚಣ” ಬೋರ್ಡ್ ಧರಿಸಿ ನಿಂತ ಬಸ್ ಮುಂಭಾಗದಲ್ಲಿ ನಿನ್ನನ್ನೇ ನೆನಪಿಸಿಕೊಂಡು ಮೈಮರೆತು ನಿಂತಿದ್ದ ನನಗೆ ಡ್ರೈವರ್ ಬಂದು ಜೋರಾಗಿ ಹಾರ್ನ್ ಹೊಡೆದಾಗಲೇ ಎಚ್ಚರವಾಗಿದ್ದು. ಎನಿವೇ ಬದುಕಿನಲ್ಲಿ ಮರೆಯಲಾಗದ ಆ ಸುಂದರ ಕ್ಷಣ ಗಳನ್ನು ನನ್ನೆದೆಯೊಳಗೆ ಬಿತ್ತಿ ಹೋದ ನಿನಗೆ ಚಿರ ಋಣಿ. ನೀನೆಲ್ಲೇ ಇದ್ದರೂ ನನಗಾದ ಈ ಅನುಭವ ನಿನಗೂ ಆ ಕೆಂಪು ಬಸ್ , ಇಂಡಿ ಟು ಚಡಚಣ ಬೋರ್ಡ್ ಕಂಡಾಗ ಆದರೆ ಅಷ್ಟೇ ಸಾಕು…..
ಇಂತಿ ನಿನ್ನ ಪ್ರೇಮದ ಪಯಣಿಗ