ರಾಜ್ಯದ ಏಕೈಕ ಮಹಿಳಾ ವಿವಿಗೆ ಕಂಟಕ, ಸದನದಲ್ಲಿ ಹೊರಬಿದ್ದ ಸತ್ಯ, ಸಾಮಾನ್ಯ ವಿವಿಯಾಗಿ ಮಾರ್ಪಾಟು…..ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಬೆಂಗಳೂರು: ಕರ್ನಾಟಕ ರಾಜ್ಯದ ಏಕೈಕ ಮಹಿಳಾ ವಿವಿ ಖ್ಯಾತಿಯ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಗೆ ಕಂಟಕ ಎದುರಾಗಿದೆ !
ಹೌದು, ಮಹಿಳೆಯರಿಗೆ ಮೀಸಲಾಗಿದ್ದ ವಿಶ್ವ ವಿದ್ಯಾಲಯವನ್ನು ಸಾಮಾನ್ಯ ವಿಶ್ವ ವಿದ್ಯಾಲಯವನ್ನಾಗಿಸಲು ಸರ್ಕಾರ ನಿರ್ಧರಿಸಿದೆ. ಮಹಿಳಾ ವಿವಿಯನ್ನು ಸಾಮಾನ್ಯ ವಿಶ್ವ ವಿದ್ಯಾಲಯವನ್ನಾಗಿ ಪುನರ್ ರಚಿಸುವ ಹಾಗೂ ವಿಜಯಪುರ ಜಿಲ್ಲೆಯ ಮೇಲೆ ಪ್ರಾದೇಶಿಕ ಅಧಿಕಾರ ವ್ಯಾಪ್ತಿಯೊಂದಿಗೆ ಸಂಯೋಜನೆಗೊಳಿಸುವ ಸಾಮಾನ್ಯ ವಿಶ್ವ ವಿದ್ಯಾಲಯವನ್ನಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರ ಸರ್ವಾಂಗೀಣ ಉನ್ನತಿಗಾಗಿ ಹಾಗೂ ಅವರು ಉನ್ನತ ಶಿಕ್ಷಣ ಸಂಶೋಧನೆಯಲ್ಲಿ ಪ್ರಗತಿ ಸಾಧಿಸುವಲ್ಲಿ ಒತ್ತು ನೀಡುವ ಉದ್ದೇಶದಿಂದ 2003-04ನೇ ಸಾಲಿನಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿಯನ್ನು ಸ್ಥಾಪಿಸಲಾಗಿದೆ.
ವಿಶ್ವ ವಿದ್ಯಾಲಯದಲ್ಲಿ ಒಟ್ಟು 31 ವಿಭಾಗಗಳು, 10 ಪಿಜಿ ಡಿಪ್ಲೊಮಾ ಕೋರ್ಸ್‌ಗಳು, 8 ಸರ್ಟಿಫಿಕೇಟ್ ಕೋರ್ಸ್‌ಗಳಿವೆ. ಕುಲಪತಿ, ಇಬ್ಬರು ರಿಜಿಸ್ಟಾರ್, ಓರ್ವ ಹಣಕಾಸು ಅಧಿಕಾರಿ, 65 ಬೋಧಕ ಸಿಬ್ಬಂದಿ, 12 ಕಾಯಂ ಬೋಧಕೇತರ ಸಿಬ್ಬಂದಿ, 117 ತ ಆತ್ಕಾಲಿಕ ಸಿಬ್ಬಂದಿ, ಪಿಡಬ್ಲುಜಿ-34 ನಲ್ಲಿ 118 ಸಿಬ್ಬಂದಿ, ಗೌರವ ಧನ ಆಧಾರದ ಮೇಲೆ-38, ಭದ್ರತಾ ಸಿಬ್ಬಂದಿ-70 ಸೇರಿ ಒಟ್ಟು 424 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಮಹಿಳಾ ವಿವಿಯನ್ನು ಮುಚ್ಚದೇ ಸಾಮಾನ್ಯ ವಿವಿಯನ್ನಾಗಿ ಪರಿವರ್ತಿಸಿ ಅಭಿವೃದ್ಧಿ ಪಡಿಸುವ ವಿಚಾರವನ್ನು ಸರ್ಕಾರ ಸದನದ ಮುಂದಿಟ್ಟಿದೆ. ಕಳೆದ ಹಲವು ದಿನಗಳಿಂದ ಮಹಿಳಾ ವಿವಿಯನ್ನು ಮುಚ್ಚಲಾಗುತ್ತಿದೆ ಎಂಬ ಚರ್ಚೆ ಜೋರಾಗಿತ್ತಾದರೂ ಕುಲಪತಿಗಳು ಹಾಗೂ ಬಿಜೆಪಿ ಶಾಸಕರು ಅದನ್ನು ಅಲ್ಲಗಳೆಯುತ್ತಲೇ ಬಂದಿದ್ದರು. ಇದೀಗ ಸತ್ಯ ಹೊರಬಿದ್ದಿದೆ.