ವಿಜಯಪುರ

ರಾಜ್ಯಾದ್ಯಂತ ವಿವಿಧೆಡೆ ಎಸಿಬಿ ದಾಳಿ, ಭ್ರಷ್ಟ ಅಧಿಕಾರಿಗಳ ಜನ್ಮ ಜಾಲಾಡಿದ ತನಿಖಾ ತಂಡ…..ಅಬ್ಬಬ್ಬಾ ಏನಿದು ಅಕ್ರಮ ಆಸ್ತಿ?

ವಿಜಯಪುರ: ರಾಜ್ಯಾದ್ಯಂತ ವಿವಿಧೆಡೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಜಾಲ ಬೀಸಿದ್ದು ಆದಾಯಕ್ಕೂ ಮೀರಿದ ಆಸ್ತಿ ಸಂಪಾದಿಸಿರುವುದು ಪತ್ತೆಯಾಗಿದೆ.

ಬುಧವಾರ ಬೆಳಗ್ಗೆ ಏಕಕಾಲದಲ್ಲಿವಿವಿಧೆಡೆ ದಾಳಿ ನಡೆದಿದೆ. ವಿಜಯಪುರದ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಗೋಪಿನಾಥ ಸಾ.ನಾಗೇಂದ್ರಸಾ ಮಳಜಿ ಮನೆ ಮೇಲೆ ದಾಳಿ ನಡೆದಿದೆ.

ಎಸಿಬಿ ಎಸ್‌ಪಿ ಬಿ.ಎಸ್.‌ ನೇಮಗೌಡರ ನೇತೃತ್ವದಲ್ಲಿ ಡಿವೈಎಸ್ ಪಿ ಮಂಜುನಾಥ ಗಂಗಲ್ಲಹಾಗೂ ಇನ್ ಸ್ಪೆಕ್ಟರ್ ಗಳಾದ ಪರಮೇಶ್ವರ ಕವಟಗಿ ಮತ್ತಿತರರು ದಾಳಿ ನಡೆಸಿದ್ದಾರೆ.

ವಿಜಯಪುರದ-3 ಹಾಗೂ ಬಾಗಲಕೋಟೆಯ 2 ಮನೆಗಳ ಮೇಲೆ ದಾಳಿ ನಡೆದಿದೆ. ಇಡೀ ದಿನ ದಾಖಲೆ ಪರಿಶೀಲನೆ ನಡೆಯಿತು. ಈ ವೇಳೆ ಶ್ರೀನಗರದ ಉತ್ತರ ಕಾಲನಿಯಲ್ಲಿರುವ 1 ವಾಸದ ಮನೆ, ವಿವಿಧ ಬಡಾವಣೆಗಳಲ್ಲಿರುವ 8 ನಿವೇಶನಗಳು, 417 ಗ್ರಾಂ ಚಿನ್ನಾಭರಣ, 6 ಕೆಜಿ 600 ಗ್ರಾಂ ಬೆಳ್ಳಿ ಸಾಮಾನುಗಳು ದೊರೆತಿವೆ.

ಬಾಗಲಕೋಟೆ ತಾಲೂಕಿನ ಹೊನ್ನಕಟ್ಟಿ ಗ್ರಾಮದಲ್ಲಿ 1 ಫಾರ್ಮ್‌ ಹೌಸ್‌, ಒಟ್ಟು 41.4 ಎಕರೆ ಕೃಷಿ ಜಮೀನು, 1 ದ್ವಿಚಕ್ರ ವಾಹನ, ವಿವಿಧ ಕಂಪನಿಯ 2 ಕಾರುಗಳು, 3.08 ಲಕ್ಷ ನಗದು, 22 ಲಕ್ಷ ರೂ.ಬೆಲೆ ಬಾಳುವ ವಿಮಾ ಪಾಲಿಸಿಗಳು, ಬ್ಯಾಂಕ್‌ ಉಳಿತಾಯ ಹಾಗೂ ಠೇವಣಿಗಳು ಸೇರಿ ಒಟ್ಟು 9 ಕೋಟಿ 46 ಲಕ್ಷ 88 ಸಾವಿರ ರೂ.ಗಳು, ಒಂದು ಬ್ಯಾಂಕ್‌ ಲಾಕರ್‌, ಸುಮಾರು 10 ಲಕ್ಷ ರೂ. ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಶೋಧನಾ ಕಾರ್ಯ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!